ಚಿಕ್ಕೋಡಿ:ರಾಜ್ಯ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಅರ್ಜಿ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾಗಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದು ವಾಮಮಾರ್ಗದ ಮೂಲಕ ಜನಸಾಮಾನ್ಯರ ಬಳಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ಇಂಥಹದ್ದೇ ಘಟನೆಯೊಂದು ನಡೆದದ್ದು ಆರೋಪ ಕೇಳಿ ಬಂದ ತಕ್ಷಣ ಅಧಿಕಾರಿಗಳು ದಾಳಿ ಮಾಡಿ ಆ ಸೈಬರ್ ಅಂಗಡಿ ಸೀಜ್ ಮಾಡಿದ್ದಾರೆ.
ಅದಕ್ಕೂ ಮುನ್ನ ಅರ್ಜಿ ಹಾಕಲು ಬಂದ ಫಲಾನುಭವಿಗಳಿಗೆ ಸೈಬರ್ ಅಂಗಡಿ ಸಿಬ್ಬಂದಿ ಆವಾಜ್ ಹಾಕಿದ್ದು ಆ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಅರ್ಜಿ ಹಾಕಬಹುದು ಎಂದು ಹೇಳಿದೆ. ಆದರೆ, ನೀವೇಕೆ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುತ್ತೀದ್ದೀರಿ ಎಂದು ಅರ್ಜಿ ಹಾಕಲು ಬಂದ ಫಲಾನುಭವಿಯೊಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ಗ್ರಾಮ ಒನ್ ಸೈಬರ್ ಸಿಬಂದಿಯು ಉಡಾಫೆ ಉತ್ತರ ನೀಡುತ್ತಾ ಆವಾಜ್ ಹಾಕಿದ್ದರು.
ಪ್ರತಿ ತಿಂಗಳು ನನಗೆ 18 ಸಾವಿರ ಹಣ ನೀಡಿ, ಆಗ ನಾನು ಸಹ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಿ ಕೊಡುತ್ತೇನೆ ಎಂದು ಗ್ರಾಹಕರಿಗೆ ಉಡಾಫೆ ಉತ್ತರ ನೀಡಿದ್ದರು. ಇದನ್ನು ಗ್ರಾಕಹರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ಅವರಖೋಡ ಗ್ರಾಮ ಒನ್ ಸಿಬಂದಿ ಹಾಲಪ್ಪ ಲೋಕೂರ ಎಂಬುವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸಾರ್ವಜನಿಕರಿಂದ 100- 200 ರೂಪಾಯಿ ಹಣ ಪಡೆಯುತ್ತಿದ್ದಾರೆ ಎಂದು ಜಾಲತಾಣಗಳಲ್ಲಿಯೇ ಗ್ರಾಹಕರು ಆರೋಪ ಮಾಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಹಾಲಪ್ಪ ಅವರೊಂದಿಗೆ ಮಾತಿಗೆ ಮಾತು ಬೆಳೆಸಿದ್ದಲ್ಲದೇ ಏನಾದರೂ ಮಾಡಿಕೊಳ್ಳಿ ಎಂದು ದರ್ಪ ತೋರಿದ್ದರು. ಆತನ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.