ಬೆಳಗಾವಿ : ಕೆಲವು ದಿನಗಳ ಹಿಂದೆ ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಅಕ್ಷರಶಃ ನಲುಗಿ ಹೊಗಿತ್ತು. ಮನೆ ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದರು. ಇದರಿಂದ ಕುಗ್ಗದ ಜನತೆ ವಿನಾಯಕನನ್ನು ಬರಮಾಡಿಕೊಳ್ಳಲು ಅದ್ಧೂರಿ ತಯಾರಿ ನಡೆಸಿದ್ದಾರೆ.
ಮಳೆಯ ಆರ್ಭಟದಲ್ಲಿ ಜನರು ನಲುಗಿದ್ದರು ವಿನಾಯಕನ ಹಬ್ಬಕ್ಕೆ ಮಾತ್ರ ಯಾವುದೇ ವಿಘ್ನ ಬಂದಿಲ್ಲ. ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿ ತುಳಿಕಿದ್ದು, ನಾಳೆಯ ಹಬ್ಬಕ್ಕೆ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹೂ, ಹಣ್ಣು ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬೇಕಾಗುವ ವಸ್ತುಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ ವಸ್ತುಗಳು ದುಬಾರಿ ಆಗಿದ್ದರೂ ಜನರು ಮಾತ್ರ ಖರೀದಿ ಮಾಡುವಲ್ಲಿ ಮುಗಿಬಿದ್ದಿದ್ದಾರೆ.
ಕುಂದಾನಗರಿಯಲ್ಲಿ ಕಳೆಗಟ್ಟಿದ ಹಬ್ಬದ ವಾತಾವರಣ.. ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ :
ಕುಂದಾನಗರಿಯಲ್ಲಿ ಅತ್ಯಂತ ಸಡಗರದಿಂದ ನಡೆಯುವ ಗಣೇಶ ಹಬ್ಬಕ್ಕೆ ನಗರ ಪೊಲೀಸ್ ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ. ಯಾವುದೇ ಅವಘಡ ಸಂಭವಿಸದಂತೆ ಆಯುಕ್ತರು ಸೇರಿ ಡಿಸಿಪಿ - 2, ಎಸಿಪಿ - 5, ಸಿಪಿಐ - 20, ಪಿಎಸ್ಐ - 12, ಎಎಸ್ಐ - 60, ಪೊಲೀಸ್ ಪೇದೆ - 980 ಹಾಗೂ ಗೃಹ ರಕ್ಷಕ ದಳ - 450 ಜೊತೆಗೆ ನಗರದಾದ್ಯಂತ ಸುಮಾರು 258 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ನಗರ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಗಣೇಶೋತ್ಸವ ಹಬ್ಬಕ್ಕೆ ಕುಂದಾನಗರಿಯಲ್ಲಿ ಸಕಲ ಸಿದ್ದತೆ ನಡೆದಿದ್ದು, ಪ್ರವಾಹವನ್ನು ಲೆಕ್ಕಿಸದೆ ಜನರು ವಿಘ್ನ ನಿವಾರಕ ಗಣೇಶನ ಹಬ್ಬದಲ್ಲಿ ತೊಡಗಿಕೊಂಡಿದ್ದಾರೆ.