ಬೆಳಗಾವಿ:ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅಂಜಲಿ ನಿಂಬಾಳ್ಕರ್ ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಟಾಂಗ್ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಚುವವರು ಹಂಚುತ್ತಾರೆ. ನಾನು ಸದ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸು. ನಾನು ಹೇಗೆ ಹಳದಿ, ಕುಂಕುಮ ಕಾರ್ಯಕ್ರಮ ಮಾಡೋಕೆ ಆಗುತ್ತದೆ?. ಕಾರ್ಯಕ್ರಮ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಎಲ್ಲರೂ ಏನು ಬೇಕಾದ ಕಾರ್ಯಕ್ರಮ ಮಾಡಬಹುದು. ಅವರವರ ಕಾರ್ಯಕ್ರಮ ಮಾಡುತ್ತಾರೆ. ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಬೆಳೆಸಲು ಪಕ್ಷದ ಕಾರ್ಯಕ್ರಮಗಳಲ್ಲಿ ಇರುತ್ತೇನೆ ಎಂದರು.
ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಫಿನ್ ಬಾಕ್ಸ್ ತೆಗೆದುಕೊಳ್ಳುವವರು, ತೆಗೆದುಕೊಳ್ಳುತ್ತಿರಬಹುದು. ಆದರೆ, ಟಿಫಿನ್ ಬಾಕ್ಸ್ ಅನ್ನು ಬಿಜೆಪಿ ಕಾರ್ಯಕರ್ತರು ಯಾರೂ ತೆಗೆದುಕೊಳ್ಳುವುದಿಲ್ಲ. ಮುಂದೆ ಮತ್ತೆ ಬೇರೆ ಬೇರೆ ಇರಬಹುದು. ಈ ಬಗ್ಗೆ ಚಿಂತನೆ ಮಾಡಬೇಕಿದೆ. ಚುನಾವಣೆ ಅಭಿವೃದ್ಧಿ ಮೇಲೆ ಆಗಬೇಕೇ ಹೊರತು, ಏನಾದ್ರೂ ಹಂಚಿ ಆಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಹಾಕುವ ಅಧಿಕಾರ ಕೊಟ್ಟಿದ್ದಾರೆ. ಆ ಮತವನ್ನೂ ಯಾರೂ ಮಾರಾಟ ಮಾಡಿಕೊಳ್ಳಬಾರದು ಎಂದು ಕಿಡಿಕಾರಿದರು.