ಕರ್ನಾಟಕ

karnataka

ETV Bharat / state

ಬಿಮ್ಸ್​​​ನಲ್ಲಿನ ಸೋಂಕಿತರ ಸಂಬಂಧಿಗಳ ಹಸಿವು ನೀಗಿಸುತ್ತಿವೆ ಬೆಳಗಾವಿಯ ಎನ್​ಜಿಒಗಳು!

ಬಿಮ್ಸ್​​ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವರನ್ನು ನೋಡಿಕೊಳ್ಳಲು ಅವರ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಸೇರಿರುತ್ತಾರೆ. ಅವರಿಗೆ ವಿವಿಧ ಸಂಘಟನೆಗಳು, ಫೌಂಡೇಶನ್‌ಗಳು ಹಾಗೂ ರಾಜಕೀಯ ಮುಖಂಡರು ಊಟದ ಜತೆಗೆ ನೀರು, ಹಣ್ಣು, ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದಾರೆ.

food distribution
ಆಹಾರ ವಿತರಣೆ

By

Published : Jun 5, 2021, 10:43 AM IST

ಬೆಳಗಾವಿ: ಮಹಾಮಾರಿ ಕೊರೊನಾಗೆ ಗಡಿ ಜಿಲ್ಲೆ ಬೆಳಗಾವಿ ತತ್ತರಿಸಿದೆ. ಸಾಲದೆಂಬುವಂತೆ ಕೊರೊನಾ ಜತೆಗೆ ಇನ್ನಿತರೆ ‌ಕಾಯಿಲೆಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ‌ಬರುವ ರೋಗಿಗಳ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಇದ್ರಿಂದ ಆಸ್ಪತ್ರೆಗಳ ಬಳಿ ರೋಗಿಗಳ ಸಂಬಂಧಿಕರು ಸೇರಿರುತ್ತಾರೆ. ರೋಗಿಗಳ ‌ಆರೈಕೆಗೆ ಆಗಮಿಸಿರುವ ಸಂಬಂಧಿಕರ ಹಸಿವನ್ನು ಬೆಳಗಾವಿಯ ಖಾಸಗಿ ಸಂಘ-ಸಂಸ್ಥೆಗಳು ನೀಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿವೆ.

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಜನತಾ ಕರ್ಫ್ಯೂ ನಂತರ ಲಾಕ್​​​ಡೌನ್​​ ಜಾರಿ ಮಾಡಿ, ಇದೀಗ ಲಾಕ್​​ಡೌನ್​​ ವಿಸ್ತರಿಸಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಹೋಟೆಲ್‌ಗಳ ಸೇವೆ ಸ್ಥಗಿತಗೊಂಡಿದೆ.

ಆರಂಭದಲ್ಲಿ ರೋಗಿಗಳ ಜತೆಗೆ ಬಂದಿರುವ ಸಂಬಂಧಿಕರು ತುತ್ತು ಅನ್ನಕ್ಕಾಗಿ ಪರದಾಡುವ ‌ಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಗರದ ಹಲವು ಸಂಘ ಸಂಸ್ಥೆಗಳು ಇಂತಹ ಜನರ ನೆರವಿಗೆ ಧಾವಿಸಿವೆ. ನಿತ್ಯ ಬೆಳಗ್ಗೆ ಉಪಹಾರ,‌ ಮಧ್ಯಾಹ್ನ ಹಾಗೂ ಸಂಜೆಯ ಊಟ ವಿತರಿಸುತ್ತಿವೆ.

ಅನಾರೋಗ್ಯ ಸಮಸ್ಯೆಗಳನ್ನು ಹೊತ್ತು ಚಿಕಿತ್ಸೆಗೆ ಬರುವ ಗ್ರಾಮೀಣ, ನಗರ ಪ್ರದೇಶದ ರೋಗಿಗಳು, ಸಂಬಂಧಿಕರು ಅನ್ನ, ಆಹಾರ ಸೇರಿ ಮೂಲ ಸೌಲಭ್ಯಗಳಿಲ್ಲದೇ‌ ತೊಂದರೆ ಅನುಭವಿಸುತ್ತಿರುವ ಬಗ್ಗೆ ರಾಜ್ಯದ ಹಲವೆಡೆ ವರದಿ ಆಗುತ್ತಿವೆ. ಆದ್ರೆ, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ.

ಊಟವಿಲ್ಲದೇ ಪರದಾಡಿದ ಘಟನೆ ನಡೆದಿಲ್ಲ:

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದರೂ ಕೂಡ ಬಿಮ್ಸ್​​​ ಆಸ್ಪತ್ರೆಗೆ ಆಗಮಿಸುವ ಯಾವೊಬ್ಬ ರೋಗಿಗಳಿಗೆ, ರೋಗಿಗಳ ಸಂಬಂಧಿಕರಿಗೆ ಊಟ ಹಾಗೂ ನೀರಿನ ಸಮಸ್ಯೆ ಆಗುತ್ತಿಲ್ಲ. ಅದಕ್ಕೆ ಕಾರಣ ವಿವಿಧ ಸಂಘಟನೆಗಳು, ಫೌಂಡೇಶನ್‌ಗಳು ಹಾಗೂ ರಾಜಕೀಯ ಮುಖಂಡರು ಊಟದ ಜತೆಗೆ ನೀರು, ಹಣ್ಣು, ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಗೆ ಆಗಮಿಸುವ ಯಾವೊಬ್ಬ ರೋಗಿಯ ಸಂಬಂಧಿಯೂ ಕೂಡ ಊಟವಿಲ್ಲದೇ ಪರದಾಡಿದ ಘಟನೆ ನಡೆದಿಲ್ಲ.

ಆದರೆ, ಮಳೆ ಪ್ರಾರಂಭವಾಗಿರೋದ್ರಿಂದ ರಾತ್ರಿ ವೇಳೆ ಮಲಗಿಕೊಳ್ಳಲು ಸೂಕ್ತ ಸ್ಥಳವಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ವೇಳೆ ರೋಗಿಗಳ ಹತ್ತಿರವೇ ನಾವು ಮಲಗುವ ಅನಿವಾರ್ಯತೆ ಎದುರಾಗಿದೆ ಅಂತಾರೆ ರೋಗಿಗಳ ಸಂಬಂಧಿಕರು. ಮಳೆ ಇಲ್ಲದಿದ್ದಾಗ ಬಿಮ್ಸ್ ಆವರಣದಲ್ಲಿ ಮರಗಳ ಸುತ್ತಲೂ ನಿರ್ಮಿಸಿರುವ ಕಟ್ಟೆಗಳ ಮೇಲೆ ರೋಗಿಗಳ ಸಂಬಂಧಿಕರು ಮಲಗುತ್ತಿದ್ದರು.

ಸಂಕಂಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿವೆ ಸಂಘ-ಸಂಸ್ಥೆಗಳು:

ಸದ್ಯ ಇಡೀ ಜಗತ್ತೇ ಕೊರೊನಾ ವಿರುದ್ಧ ಹೋರಾಡುತ್ತಿದೆ. ಇತ್ತ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದ ಲಾಕ್‌ಡೌನ್‌ನಿಂದ ಕಾರ್ಮಿಕರು, ಕಡು ಬಡವರು, ನಿರಾಶ್ರಿತರು, ಭಿಕ್ಷುಕರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿ ನರಳುತ್ತಿರುವ ಜನರಿಗೆ ಜಿಲ್ಲೆಯ ಪೃಥ್ವಿಸಿಂಗ್ ಫೌಂಡೇಶನ್, ಅಲ್ ಇಕ್ರ್ ಸಂಸ್ಥೆ ಸೇರಿದಂತೆ ಅನೇಕ ಸಂಘಟನೆಗಳು ಜಿಲ್ಲೆಯಲ್ಲಿ ಹಸಿದವರ ಹೊಟ್ಟೆಗೆ ಅನ್ನ ನೀಡುವ ಮಾನವೀಯ ಕೆಲಸಕ್ಕೆ ಮುಂದಾಗಿವೆ. ಇವರ ಕಾರ್ಯಕ್ಕೆ ಸಾರ್ವಜನಿಕರು, ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಬಂದ್:

ಕೊರೊನಾ ತಡೆಗೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಪರಿಣಾಮ ಹೋಟೆಲ್‌ನಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ, ಸಂಬಂಧಿಕರಿಗೆ ಹೊರಗಡೆ ಎಲ್ಲಿಯೂ ಊಟ ಸಿಗುತ್ತಿಲ್ಲ. ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳು, ಸಂಬಂಧಿಕರ್ಯಾರೂ ಕೂಡ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲಾಗುತ್ತಿದ್ದು, ಬಹುತೇಕ ಸಂಘಟನೆಗಳು ಪ್ರತಿಯೊಂದು ಆಸ್ಪತ್ರೆಗಳಿಗೆ ತೆರಳಿ ಊಟದ ಜತೆಗೆ ನೀರು, ಹಣ್ಣುಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿವೆ.

ಇದನ್ನೂ ಓದಿ:ಇಂದಿರಾ ಕ್ಯಾಂಟೀನ್​ಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ ಹು-ಧಾ ಮಹಾನಗರ ಪಾಲಿಕೆ

ಇತ್ತ ಮಳೆಗಾಲ ಆರಂಭವಾಗಿರೋದ್ರಿಂದ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಪರದಾಡುವಂತಾಗಲಿದೆ. ಮುಂಜಾಗ್ರತಾ ಕ್ರಮವಾಗಿ ರೋಗಿಗಳ ಸಂಬಂಧಿಕರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಉಳಿದುಕೊಳ್ಳಲು ಆಸ್ಪತ್ರೆಯಲ್ಲಿಯೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ABOUT THE AUTHOR

...view details