ಬೆಳಗಾವಿ:ಮಾರ್ಕಂಡೇಯ ನದಿ ಅಬ್ಬರಕ್ಕೆ ಸುಪ್ರಸಿದ್ದ ಕುಂದರಗಿ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿದೆ. ಮಠದಲ್ಲಿ ಸಿಲುಕಿದ್ದ 15 ಜನರನ್ನು ಗೋಕಾಕ್ ಜಿಲ್ಲಾಡಳಿತ ರಕ್ಷಣೆ ಮಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಣ್'ನೀರ'ಲ್ಲಿ ಮುಳುಗಿದ ಕುಂದಾನಗರಿ.. ಎಲ್ಲೆಲ್ಲೂ ನೀರು, ಮುಳುಗುತ್ತಿದೆ ಬದುಕು.. ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಹರಿಯುವ ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ತಾಲೂಕಿನ ಸುಪ್ರಸಿದ್ದ ಕುಂದರಗಿ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿದ್ದು, ಮಠದ ಅರ್ಚಕ ಸೇರಿ 15 ಜನರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಕಳೆದೊಂದು ವಾರದಿಂದ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಮಾರ್ಕಂಡೇಯ ನದಿ ಹರಿಯುತ್ತಿರುವ ಪರಿಣಾಮ, ಅನೇಕ ಗ್ರಾಮಗಳು ಜಲಾವೃತವಾಗಿವೆ. ನದಿದಂಡೆಯಲ್ಲಿರುವ ಅನೇಕ ಗ್ರಾಮಗಳಲ್ಲಿ ಜನರು ಸಿಲುಕಿದ್ದು, ಅವರ ರಕ್ಷಣೆ ಮಾಡಲಾಗುತ್ತಿದೆ.
ಮಳೆಯಿಂದ ಭೂ ಕುಸಿತ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ದತ್ತವಾಡ ಗ್ರಾಮದ ಬಳಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆ ಸುಳಿಯುತ್ತಿರುವುದರಿಂದ ರಸ್ತೆ ಸೇರಿದಂತೆ ಭೂಕುಸಿತ ಉಂಟಾಗಿದೆ. ದತ್ತವಾಡ ಗ್ರಾಮದ ಬಳಿ ರಸ್ತೆ ಕುಸಿತ ಕಂಡು ಬಂದಿದ್ದು, ಸುಮಾರು ಅರ್ಧ ಕಿ.ಮೀ ನಷ್ಟು ಕುಸಿದಿದೆ. ರಸ್ತೆ ಕುಸಿತ ಹಿನ್ನೆಲೆ ಪೊಲೀಸರು ವಾಹನಗಳ ಸಂಚಾರ ಬಂದ್ ಮಾಡಿದ್ದಾರೆ.
ಸಂಪರ್ಕ ಕಳೆದುಕೊಂಡ ಸೇತುವೆಗಳು..ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನರು
ಖಾನಾಪೂರ ತಾಲೂಕಿನ ಪಾರಿಶ್ವಾಡ, ಅವರೊಳ್ಳಿ ಗ್ರಾಮದ ಮುಖ್ಯ ರಸ್ತೆಗಳ ಮೇಲೆ ನೀರು ನಿಂತಿದ್ದು, ಗ್ರಾಮಸ್ಥರು ರಸ್ತೆ ದಾಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮಟ್ಟ ಕ್ಷಣ ಕ್ಷಣಕ್ಕೆ ಜಾಸ್ತಿಯಾಗುತ್ತಿದ್ದು, ಜನರು ಸಹಾಯಕ್ಕೆ ಅಂಗಲಾಚುತ್ತಿದ್ದಾರೆ. ತಾಲೂಕಿನ ಅಶೋಗಾ ರಸ್ತೆ ಸಂಪರ್ಕ ಕಡಿತವಾಗಿದ್ದು, ಸ್ವಂತ ಮನೆಗಳಿಗೆ ತೆರಳಲು ಜನರಿಗೆ ಆಗುತ್ತಿಲ್ಲ. ಮಲಪ್ರಭಾ ನದಿ ಒಳ ಹರಿವು ಜಾಸ್ತಿಯಾಗಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಗ್ರಾಮಗಳು ತುತ್ತಾಗುವ ಸಂಭವವಿದೆ.
ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ..ಮೇವಿನ ಬಣವೆ ನದಿ ಪಾಲು
ಜಿಲ್ಲೆಯಲ್ಲಿ ಸುರಿಯತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವಾರು ಅವಾಂತರ ಸೃಷ್ಟಿಯಾಗಿವೆ. ರೈತನ ಗದ್ದೆಗಳಿಗೆ ನೀರು ನುಗ್ಗಿದ್ದು, ದನಗಳಿಗೆ ಹಾಕುವ ಮೇವಿನ ಬಣವೆಗಳು ನದಿ ಪಾಲಾಗಿವೆ. ಖಾನಾಪೂರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಮಲಪ್ರಭಾ ನದಿ ನೀರು ಹೆಚ್ಚಾಗಿದ್ದು, ಸುಮಾರು 20 ಸಾವಿರ ಮೌಲ್ಯದ ಮೇವಿನ ಬಣವೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಸುತ್ತಲೂ ಪ್ರವಾಹ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಖಾನಾಪೂರ ತಾಲೂಕಿನ ಗುಂಡಿಗವಾಡ ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದ್ದು, ಸೇತುವೆಗಳು ಜಲಾವೃತವಾಗಿವೆ. ಮಳೆ ನೀರಿಗೆ ಕೊಚ್ಚಿಕೊಂಡು ಬರುತ್ತಿರುವ ಕಸ ಸೇತುವೆಗೆ ತಟ್ಟುತಿದ್ದು, ಜೆಸಿಬಿ ಮುಖಾಂತರ ಕಸ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.