ಬೆಳಗಾವಿ :ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆ ಇಂದು ಬೆಳಗ್ಗೆಯಿಂದ ಜೋರು ಗಾಳಿ, ಮಳೆಯಿಂದಾಗಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಕೇರಳ,ಆಂಧ್ರಪ್ರದೇಶ ಹಾಗೂ ಗುಜರಾತ್ ಸೇರಿದಂತೆ ಇತರ ರಾಜ್ಯಗಳು ತೌಕ್ತೆ ಚಂಡಮಾರುತಕ್ಕೆ ನಲುಗಿದ್ದು, ಬೆಳಗ್ಗೆ ಕುಂದಾನಗರಿಗೂ ಕಾಲಿಟ್ಟಿದೆ.
ತೌಕ್ತೆ ಚಂಡಮಾರುತ, 60 ರಿಂದ 70ರಷ್ಟು ವೇಗದಲ್ಲಿ ಜೋರು ಗಾಳಿ ಬೀಸುತ್ತಿರುವುದ್ದಲ್ಲದೇ ಭಾರಿ ಪ್ರಮಾಣದಲ್ಲಿ ಮಳೆಯೂ ಆಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಪ್ರತಿಕೂಲ ವಾತಾವರಣ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ, ಪರಿಸ್ಥಿತಿ ಅವಲೋಕಿಸಿ ಮುಂದಿನ ವಿಮಾನಗಳ ಹಾರಾಟದ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.