ಬೆಳಗಾವಿ:ಆಪರೇಷನ್ ಮಾಡುವ ಶಕ್ತಿ ಬಿಜೆಪಿಯವರಿಗಷ್ಟೇ ಏಕೆ ಕಾಂಗ್ರೆಸ್, ಜೆಡಿಎಸ್ ನಾಯಕರಿಗೂ ಇದೆ. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದು, ಸರ್ಕಾರ ಉಳಿಸಿಕೊಳ್ಳುವ ತಾಕತ್ತು ನಮಗೂ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದಾರೆ: ಸಚಿವ ಸತೀಶ್ ಜಾರಕಿಹೊಳಿ - ಸಚಿವ ಜಾರಕಿಹೊಳಿ
ಆಪರೇಷನ್ ಮಾಡುವ ಶಕ್ತಿ ಕಾಂಗ್ರಸ್ಗೂ ಇದೆ - ನಮ್ಮ ಸಂಪರ್ಕದಲ್ಲೂ ಬಿಜೆಪಿಯ 80 ಶಾಸಕರು ಸಂಪರ್ಕದಲ್ಲಿದ್ದಾರೆ - ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದರೆ, ಉಳಿಸಿಕೊಳ್ಳಲು ನಾವೂ ಕೂಡ ಆಪರೇಷನ್ ಮಾಡುತ್ತೇವೆ - ಸಚಿವ ಜಾರಕಿಹೊಳಿ ಹೇಳಿಕೆ
ಬೆಳಗಾವಿಯ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉಳಿಸಿಕೊಳ್ಳಲು ಬೇಕಾದ ಶಾಸಕರ ಅಗತ್ಯ ಸಂಖ್ಯೆ ನಮ್ಮಲ್ಲಿದೆ. ನಮ್ಮ ನಾಯಕರ ಹಾಗೂ ನನ್ನ ಸಂಪರ್ಕದಲ್ಲಿ ಹಲವು ಬಿಜೆಪಿ ಶಾಸಕರು ಇದ್ದಾರೆ. ಬಿಜೆಪಿಯವರ ಥರ 20, 30 ಶಾಸಕರು ನನ್ನ ಬಳಿ ಇದ್ದಾರೆ ಎಂಬ ಉಡಾಫೆ ಮಾತು ನಾನು ಆಡುವುದಿಲ್ಲ. ನಮ್ಮ ಸರ್ಕಾರ ಉಳಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತೇವೆ. ಬಿಜೆಪಿಯವರಿಗೆ ಅಧಿಕಾರ ಸಿಗಲಿ ಎಂದು ನಾವು ಸುಮ್ಮನೆ ಕೂರುವುದಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಾವೂ ಆಪರೇಷನ್‍ಗೆ ಸಿದ್ಧರಿದ್ದೇವೆ. ಬಿಜೆಪಿಯ ಯಾವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಈಗ ನಾವು ಹೇಳುವುದಿಲ್ಲ. ಅನಿವಾರ್ಯ ಬಂದಾಗ ಹೇಳುತ್ತೇವೆ ಎಂದು ಹೇಳಿಕೆ ನೀಡಿದರು.
ಬಿಜೆಪಿ ಕೇಂದ್ರದಲ್ಲಿ 300 ಸ್ಥಾನ ಪಡೆದರೆ ಮಾತ್ರ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಾರೆ. ಆದರೆ ಬಿಜೆಪಿಗೆ 300 ಸ್ಥಾನ ಬರುತ್ತೆ ಎಂದು ಯಾವ ಸಮೀಕ್ಷೆಯೂ ಹೇಳುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿಯವರೇ ಸರ್ಕಾರ ರಚಿಸಲು ಮತ್ತೊಬ್ಬರಿಗೆ ಕೈ ಮುಗಿಯಬೇಕಾದ ಅನಿವಾರ್ಯತೆ ಇದೆ. ಮೋದಿ ಪಿಎಂ ಆಗಲು ದೊಡ್ಡ ಸರ್ಕಸ್ ಮಾಡಬೇಕಾಗುತ್ತದೆ. ಹೀಗಾಗಿ ಆಪರೇಷನ್ ಕಮಲ ಅವರಿಂದ ಸಾಧ್ಯವಿಲ್ಲ. ಬಿಜೆಪಿಯವರಿಗೆ ಆಪರೇಷನ್ ಮಾಡುವಂತೆ ಅವರ ನಾಯಕರು ಹೇಳಿಲ್ಲ, ನಮಗೂ ಹೇಳಿಲ್ಲ. ಅವರು ಸರ್ಕಾರ ರಚಿಸಲು ಪ್ರಯತ್ನ ಮಾಡುತ್ತಿದ್ದಂತೆ ನಾವೂ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದರು.