ಬೆಳಗಾವಿ: ರಾಜ್ಯ ಪ್ರವೇಶಿಸಲು ತುಂಬು ಗರ್ಭಿಣಿ ಪತ್ನಿಯೊಂದಿಗೆ ಪರದಾಡುತ್ತಿದ್ದ ಕನ್ನಡಿಗನಿಗೆ ಸಹಾಯ ಮಾಡಿ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಂದಿಗೋಣ ಮೂಲದ ರಾಘವೇಂದ್ರ ಭಟ್ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ 8 ತಿಂಗಳ ಗರ್ಭಿಣಿ ಆಗಿದ್ದು, ಪುಣೆ ಪೊಲೀಸರ ಅನುಮತಿ ಪಡೆದು ಆ್ಯಂಬುಲೆನ್ಸ್ ಮೂಲಕ ತವರಿನತ್ತ ಪ್ರಯಾಣ ಬೆಳೆಸಿದ್ದರು.
ನಿಪ್ಪಾಣಿ ಸಮೀಪದ ಚೆಕ್ಪೋಸ್ಟ್ ಬಳಿ ದಂಪತಿಗೆ ರಾಜ್ಯ ಪ್ರವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ದಂಪತಿ ಪರದಾಟದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ದಂಪತಿ ನೆರವಿಗೆ ಬೆಳಗಾವಿ ಎಸ್ಪಿ ಧಾವಿಸಿದ್ದು, ರಾಘವೇಂದ್ರ ಭಟ್ ಗರ್ಭಿಣಿ ಪತ್ನಿ ಜೊತೆ ರಾಜ್ಯದ ಗಡಿ ಪ್ರವೇಶಿಸಿ ತವರಿನತ್ತ ಪ್ರಯಾಣ ಬೆಳೆಸಿದ್ದಾರೆ.
ರಾಜ್ಯದ ಗಡಿ ಪ್ರವೇಶಿಸಲು ಸಹಾಯ ಮಾಡಿದ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ದಂಪತಿ ಕೃತಜ್ಞತೆ ಹೇಳಿದ್ಧಾರೆ.