ಬೆಳಗಾವಿ : "ಕರ್ನಾಟಕ ಏಕೀಕರಣ" ಹೆಸರಿನಲ್ಲಿ ನಾಟಕವನ್ನೆ ರಚಿಸಿ, ನಾಡಿನ ತುಂಬಾ ಪ್ರದರ್ಶನ ಮಾಡಿ ಜಾಗೃತಿ ಮೂಡಿಸಿದ ಶ್ರೇಯಸ್ಸು ಬೆಳಗಾವಿ ಜಿಲ್ಲೆಯ ಹಿರಿಯ ರಂಗಕರ್ಮಿ, ನಾಟ್ಯಭೂಷಣ, ನಾಡೋಜ ಏಣಗಿ ಬಾಳಪ್ಪನವರಿಗೆ ಸಲ್ಲುತ್ತದೆ. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ನಿಮಿತ್ತ ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಇಂದು ಕರ್ನಾಟಕ ರಾಜ್ಯ ನಾಮಕರಣವಾಗಿ 50 ವರ್ಷಗಳು ಸಂದಿವೆ. ಈ ಮಹತ್ಕಾರ್ಯಕ್ಕೆ ಅನೇಕ ಮಹನೀಯರು ತಮ್ಮದೇ ಕೊಡುಗೆ ನೀಡಿದ್ದಾರೆ. ಅದರಲ್ಲಿ ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪನವರ ಸೇವೆ ಕೂಡ ಅವಿಸ್ಮರಣೀಯ. ಏಕೀಕರಣಕ್ಕೆ ಹೋರಾಟದಲ್ಲಿ ಎಲ್ಲರೂ ಧುಮುಕಿದ ಸಂದರ್ಭದಲ್ಲಿ ನಾನು ಯಾವ ರೀತಿ ಸೇವೆ ಸಲ್ಲಿಸಬೇಕೆಂದು ಯೋಚಿಸಿದಾಗ ಹುಟ್ಟಿದ್ದೆ "ಕರ್ನಾಟಕ ಏಕೀಕರಣ" ನಾಟಕ. ಬಳ್ಳಾರಿ ಗಡಿಯಲ್ಲಿ ಕನ್ನಡ-ತೆಲುಗು, ಬೆಳಗಾವಿ ಗಡಿಯಲ್ಲಿ ಕನ್ನಡ-ಮರಾಠಿ, ಬೆಂಗಳೂರಿನ ಬಳಿಯ ಹೊಸೂರು ಭಾಗದಲ್ಲಿ ಕನ್ನಡ-ತಮಿಳು ಮಾತನಾಡುವ, ಎಂದರೆ ಎರಡೂ ಭಾಷೆ ಮಾತನಾಡುವ ಮೂವರು ಹಾಗೂ ಕನ್ನಡ ಮಾತ್ರ ಮಾತನಾಡುವ ಒಬ್ಬ ವ್ಯಕ್ತಿ ಹೀಗೆ ನಾಲ್ಕು ಕುಟುಂಬಗಳ ಪಾತ್ರಗಳು ಏಕೀಕರಣ ನಾಟಕದಲ್ಲಿ ಬರುತ್ತವೆ. ಅವರೆಲ್ಲರೂ ಬೇರೆ ಬೇರೆ ಭಾಷೆ ಮಾತನಾಡಿದರೂ ತಮ್ಮ ಮಾತೃ ಭಾಷೆ ಕನ್ನಡ, ರಾಜ್ಯ ಕರ್ನಾಟಕ ಎಂಬ ಸಂದೇಶ ನಾಟಕದಲ್ಲಿತ್ತು.
ಬೈಲಹೊಂಗಲದ ಅಳವಂಡಿ ಶಿವಮೂರ್ತಿ ಸ್ವಾಮೀಜಿ ಅವರು 1949ರಲ್ಲಿ ಆ ನಾಟಕಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ಸವದತ್ತಿ, ಚಿಕ್ಕೋಡಿ, ಖಾನಾಪುರ, ಧಾರವಾಡ, ವಿಜಯಪುರ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಬಾಳಪ್ಪನವರು ನಾಟಕ ಪ್ರದರ್ಶಿಸಿ ಜನರ ಎದೆಯಲ್ಲಿ ಕರ್ನಾಟಕದ ಅಭಿಮಾನ ಪುಟಿದೇಳುವಂತೆ ಮಾಡಿದ್ದರು ಎಂದು ಈಟಿವಿ ಭಾರತಕ್ಕೆ ಬಾಳಪ್ಪನವರ ಪುತ್ರ ಸುಭಾಷ ಏಣಗಿ ಅವರು ಮಾಹಿತಿ ನೀಡಿದರು. ಕರ್ನಾಟಕ ನಾಮಕರಣ ಆದ ದಿನ 1973 ನವೆಂಬರ್ 1ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಅಂದಿನ ಸಿಎಂ ದೇವರಾಜ ಅರಸು ಅವರು ನಮ್ಮ ತಂದೆಯವರನ್ನು ಸತ್ಕರಿಸಿ ಗೌರವಿಸಿದ್ದರು ಎಂದರು.
ಬೆಳಗಾವಿಯಲ್ಲಿ ಏಕೀಕರಣ ಮೊದಲ ಸಭೆ :ಕರ್ನಾಟಕ ಏಕೀಕರಣ ಹೋರಾಟದ ಮೊದಲ ಪರಿಷತ್ತು 25-12-1924ರಂದು ಬೆಳಗಾವಿಯಲ್ಲೇ ನಡೆದಿತ್ತು. ಸರ್ ಸಿದ್ದಪ್ಪ ಕಂಬಳಿಯವರು ಆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.
ಏಕೀಕರಣಕ್ಕೆ ಶಕ್ತಿ ತುಂಬಿದ ಕನ್ನಡ ಬಳಗ :ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ 1963ರಲ್ಲಿ ಆರಂಭವಾದ ಕನ್ನಡ ಬಳಗ ಏಕೀಕರಣ ಹೋರಾಟಕ್ಕೆ ಬಲ ತಂದು ಕೊಟ್ಟಿತು. ಸಕ್ರಿಯವಾಗಿ ಇಲ್ಲಿನ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗುತ್ತಿದ್ದರು. ಈಗಲೂ ಕೂಡ ಗಡಿಯಲ್ಲಿ ಕನ್ನಡ ಚಟುವಟಿಕೆಗಳನ್ನು ನಡೆಸುವ ಮೂಲಕ ಕನ್ನಡ ಬಳಗ ಜೀವಂತವಾಗಿದೆ.
ಹಿರಿಯ ಜಾನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಈಟಿವಿ ಭಾರತ್ ಜೊತೆಗೆ ಮಾತನಾಡಿ, ನಾಗನೂರು ರುದ್ರಾಕ್ಷಿ ಮಠ ಏಕೀಕರಣ ಹೋರಾಟದ ಕೇಂದ್ರ ಸ್ಥಾನವಾಗಿತ್ತು. ಆ ಬಳಿಕ ಹೋರಾಟಕ್ಕೆ ಬಹಳ ದೊಡ್ಡ ಆಶ್ರಯ ಕೊಟ್ಟಿದ್ದು ಕೆಎಲ್ಇ ಸಂಸ್ಥೆ. ಯಾಕೆಂದರೆ ಕೆಎಲ್ಇ ಸ್ಥಾಪಿಸಿದ್ದ ಸಪ್ತರ್ಷಿಗಳಿಗೆ 1916ರಷ್ಟು ಹಿಂದೆಯೇ ಕರ್ನಾಟಕ ಪರಿಕಲ್ಪನೆ ಇತ್ತು. ಹಾಗಾಗಿ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಎಂದು ಹೆಸರಿಟ್ಟಿದ್ದರು. ಪ್ರೊ. ಶಿ.ಶಿ.ಬಸವನಾಳರಂಥ ದಿಗ್ಗಜರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಸವನಾಳರು, ಮಮದಾಪುರ ಅವರು ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಸ್ವಾಮೀಜಿ ಬಹಳ ಆತ್ಮೀಯತೆ ಹೊಂದಿದ್ದರು.