ಕರ್ನಾಟಕ

karnataka

ETV Bharat / state

ಬಳ್ಳಾರಿ ಆಯ್ತು ಈಗ ಬೆಳಗಾವಿಯಲ್ಲೂ ಹೊಸ ಜಿಲ್ಲೆ ಕೂಗು - Division of Belgaum District

18 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಬೃಹತ್ ಜಿಲ್ಲೆ ಆಗಿರುವ ಬೆಳಗಾವಿಯನ್ನು ಮೂರು ಜಿಲ್ಲೆಗಳನ್ನಾಗಿ ವಿಂಗಡಿಸಬೇಕು ಎಂದು ಈ ಹಿಂದಿನ ಜೆ.ಹೆಚ್.ಪಟೇಲ್ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿ ವಾಪಸ್ ಪಡೆಯಲಾಗಿತ್ತು. ಆದರೀಗ ಮತ್ತೆ ಜಿಲ್ಲಾ ವಿಭಜನೆ ಕೂಗು ಕೇಳಿ ಬಂದಿದ್ದು, ಒಬ್ಬೊಬ್ಬ ನಾಯಕರು ಒಂದೊಂದು ತಾಲೂಕಿನ ಹೆಸರು ಹೇಳುತ್ತಿದ್ದಾರೆ.

By

Published : Dec 16, 2020, 5:21 PM IST

ಬೆಳಗಾವಿ: ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯನ್ನು ವಿಭಜನೆ ಮಾಡಬೇಕು ಎಂಬ ಕೂಗು ಒಂದೆಡೆಯಾದ್ರೆ, ಮತ್ತೊಂದೆಡೆ ಯಾವ ತಾಲೂಕುಗಳನ್ನು ಜಿಲ್ಲೆಯನ್ನಾಗಿಸಬೇಕು ಎಂಬ ತಲೆನೋವು ಜಿಲ್ಲಾ ನಾಯಕರಲ್ಲಿ ಮೂಡಿದೆ.

ಹೌದು, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗು ಹಲವು ದಶಕಗಳಿಂದಲೇ ಹುಟ್ಟಿಕೊಂಡಿದ್ದು, ಈವರೆಗೂ ಬೇಡಿಕೆ ಈಡೇರಿಲ್ಲ. ಆದರೆ, ರಾಜ್ಯ ಸರ್ಕಾರ ಕಳೆದೆರಡು ದಿನಗಳ ಹಿಂದೆ ಅಧಿಕೃತವಾಗಿ ಬಳ್ಳಾರಿ ವಿಭಜಿಸಿ ವಿಜಯನಗರವನ್ನು 31ನೇ ಜಿಲ್ಲೆಯನ್ನಾಗಿ ಪ್ರಕಟಿಸಿತು. ಆದರೀಗ ಬಳ್ಳಾರಿ ಜಿಲ್ಲೆ ವಿಭಜನೆ ಆಗಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿ ಬರುತ್ತಿದೆ.

18 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಬೃಹತ್ ಜಿಲ್ಲೆ ಆಗಿರುವ ಬೆಳಗಾವಿಯನ್ನು ಮೂರು ಜಿಲ್ಲೆಗಳನ್ನಾಗಿ ವಿಂಗಡಿಸಬೇಕು ಎಂದು ಈ ಹಿಂದಿನ ಜೆ.ಹೆಚ್.ಪಟೇಲ್ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿ ವಾಪಸ್ ಪಡೆಯಲಾಗಿತ್ತು. ಆದರೀಗ ಮತ್ತೆ ಜಿಲ್ಲಾ ವಿಭಜನೆ ಕೂಗು ಕೇಳಿ ಬಂದಿದ್ದು, ಒಬ್ಬೊಬ್ಬ ನಾಯಕರು ಒಂದೊಂದು ತಾಲೂಕಿನ ಹೆಸರು ಹೇಳುತ್ತಿದ್ದಾರೆ.

ಹೆಚ್ಚಿದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು

ಇತ್ತ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿ‌, ಗೋಕಾಕ್ ಹಾಗೂ ಚಿಕ್ಕೋಡಿ ಎರಡು ತಾಲೂಕುಗಳ ಪೈಕಿ ಒಂದು ತಾಲೂಕಿನವರು ಹಿಂದೆ ಸರಿದರೆ, ಜಿಲ್ಲೆ ವಿಂಗಡಿಸಬಹುದು ಎಂದು ಹೇಳಿಕೆ‌ ನೀಡಿದ್ದರು. ಆದ್ರೆ, ಬೈಲಹೊಂಗಲದಲ್ಲಿ ಬ್ರಿಟಿಷರ ಕಾಲದಿಂದಲೂ ಉಪ ವಿಭಾಗಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಕೇಂದ್ರಕ್ಕೆ ಏನೇನೂ ಅನುಕೂಲಗಳು ಬೇಕೋ ಅವೆಲ್ಲ ಸೌಲಭ್ಯಗಳು ಬೈಲಹೊಂಗಲದಲ್ಲಿದೆ. ಹೀಗಾಗಿ ಬೈಲಹೊಂಗಲ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಇತ್ತ ಜಿಲ್ಲಾ ವಿಭಜನೆ ಲಾಭ ಪಡೆಯಲು ರಮೇಶ ಜಾರಕಿಹೊಳಿ‌ ‌ಮುಂದಾಗಿದ್ದಾರೆ. ಜಿಲ್ಲಾ ವಿಭಜನೆಗೆ ಅವರೇ ಅಡ್ಡಲಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.

ಬರೋಬ್ಬರಿ ಮೂರು ದಶಕಗಳ ಬಳಿಕ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಈ ಹಿಂದಿನ ಸರ್ಕಾರಗಳು ರಚಿಸಿದ್ದ ಆಯೋಗಗಳ ವರದಿಯಂತೆ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಗೋಕಾಕ್ ಹಾಗೂ ಚಿಕ್ಕೋಡಿ ಜಿಲ್ಲೆಗಳನ್ನಾಗಿ ಮಾಡಿ ಎಂಬ ಆಗ್ರಹ ಗೋಕಾಕ್ ಹಾಗೂ ಚಿಕ್ಕೋಡಿ ತಾಲೂಕಿನ ಜನರದ್ದಾದರೆ, ಜಿಲ್ಲೆಗೆ ಬೇಕಾದ ಎಲ್ಲ ಸೌಲಭ್ಯಗಳು ಬೈಲಹೊಂಗಲದಲ್ಲಿವೆ‌. ಹೀಗಾಗಿ ಅದನ್ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಯ ಅಲ್ಲಿನ‌ ಜನರದ್ದಾಗಿದೆ.

ಈ ಕುರಿತು ಮಾತನಾಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯ ಅವರನ್ನು ಐದು ಬಾರಿ ಶಾಸಕರನ್ನಾಗಿ ಕಳುಹಿಸಿದ್ದು ಗೋಕಾಕ್ ಕ್ಷೇತ್ರದ ಜನತೆ. ಜಾರಕಿಹೊಳಿ ಮನೆತನಕ್ಕೆ ಗೋಕಾಕ್ ತಾಲೂಕಿನ ಜನ ಅಪಾರ ಕೊಡುಗೆ ನೀಡಿದ್ದಾರೆ. ಯಾವುದೇ ಸರ್ಕಾರ ಇದ್ದರೂ ಜಾರಕಿಹೊಳಿ ಸಹೋದರರ ಪೈಕಿ ಒಬ್ಬರು ಸಚಿವರಾಗುತ್ತಾರೆ. ಇದನ್ನು ಮನಗಂಡು ಗೋಕಾಕ್ ಚಿಕ್ಕೋಡಿ ಎರಡನ್ನೂ ಜಿಲ್ಲೆಗಳನ್ನಾಗಿ ಮಾಡಲಿ ಹಿಂದೆ ಬ್ರಿಟೀಷರು ಸಹ ಗೋಕಾಕ್‌ನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡಿದ್ರು. ಬಳಿಕ ಬೆಳಗಾವಿಯತ್ತ ಮುಖ ಮಾಡಿದ್ರು. ಹೀಗಾಗಿ ಭೌಗೋಳಿಕವಾಗಿ ಗೋಕಾಕ್ ಜಿಲ್ಲೆ ಮಾಡೋದು ಸೂಕ್ತ. ರಮೇಶ್ ಜಾರಕಿಹೊಳಿಯವರಿಗೆ ಜಿಲ್ಲೆ ವಿಭಜನೆ ಬಗ್ಗೆ ಆಸಕ್ತಿ ಇಲ್ಲ. ಹೀಗಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆಂದು ಆರೋಪಿಸಿದ್ದಾರೆ.

ಓದಿ...ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತ ಜನಜಾಗೃತಿ.. ಇಂದಿನಿಂದ ತಾಲೂಕು ಪ್ರವಾಸ ಆರಂಭ

ಇತ್ತ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಬೈಲಹೊಂಗಲ ಜಿಲ್ಲೆ ಮಾಡುವಂತೆ ಒತ್ತಾಯಿಸುತ್ತಿದ್ದು, ಸ್ವಾತಂತ್ರ‍್ಯ ಹೋರಾಟ ಇತಿಹಾಸ ನೋಡಿದ್ರೆ ವೀರರಾಣಿ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಅವರಂತಹ ಸ್ವಾತಂತ್ರ‍್ಯ ಹೋರಾಟಗಾರರು ಇದ್ದ ನಾಡು ಬೈಲಹೊಂಗಲ. ಬೈಲಹೊಂಗಲದಲ್ಲಿ ಬ್ರಿಟಿಷರ ಕಾಲದಿಂದಲೂ ಉಪವಿಭಾಗಾಧಿಕಾರಿ ಕಚೇರಿ ಇದೆ. ಜಿಲ್ಲಾ ಕೇಂದ್ರಕ್ಕೆ ಏನೇನೂ ಅನುಕೂಲಗಳು ಬೇಕೋ ಅವೆಲ್ಲ ಸೌಲಭ್ಯ ಬೈಲಹೊಂಗಲದಲ್ಲಿವೆ. ಹೀಗಾಗಿ ಬೈಲಹೊಂಗಲ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಪಟ್ಟು ಹಿಡಿದ್ದಿದ್ದಾರೆ. ಅದೇನೇ ಇರಲಿ ಬಳ್ಳಾರಿ ಜಿಲ್ಲಾ ವಿಭಜನೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ದಿನೇ ದಿನೆ ಜಾಸ್ತಿ ಆಗುತ್ತಿದೆ.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್ ಹಾಗೂ ಚಿಕ್ಕೋಡಿ ಪೈಕಿ ಒಬ್ಬರು ಹಿಂದೆ ಸರಿಯಿರಿ ಎಂಬ ಹೇಳಿಕೆ ನೀಡಿದ್ರೆ, ನಿಪ್ಪಾಣಿ ಜಿಲ್ಲೆಯಾಗಬೇಕೆಂದು ಸಚಿವೆ ಶಶಿಕಲಾ ಜೊಲ್ಲೆ ಆಗ್ರಹಿಸುತ್ತಿದ್ದಾರೆ, ಇತ್ತ ಸತೀಶ ಜಾರಕಿಹೊಳಿ ಗೋಕಾಕ್ ಜಿಲ್ಲೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಶಾಸಕ ಉಮೇಶ ಕತ್ತಿ, ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿಯವರು ಚಿಕ್ಕೋಡಿ ಜಿಲ್ಲೆ ಆಗಬೇಕೆಂಬ ಬಯಕೆಯನ್ನು ಇಟ್ಟುಕೊಂಡಿದ್ದಾರೆ. ಇದಲ್ಲದೇ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಸಿಎಂ ಬಿಎಸ್‌ವೈಗೆ ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಕೈ ಮುಗಿದು ಹೋಗಿದ್ದು, ಸದ್ಯದ ಮಟ್ಟಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳೋದು ಕಷ್ಟ ಎನ್ನಲಾಗಿದೆ.

ಆದ್ರೆ, ಮುಂಬರುವ ದಿನಗಳಲ್ಲಿ ಜಿಲ್ಲಾ ವಿಭಜನೆ ಹೋರಾಟ ತೀವ್ರ ಸ್ವರೂಪ ಪಡೆಯಲಿದ್ದು, ಸರ್ಕಾರಕ್ಕೆ ಹಾಗೂ ಜಿಲ್ಲಾ ವಿಭಜನೆ ಜಿಲ್ಲಾ ಬಿಜೆಪಿಯಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಲಿದೆ ಎಂಬ ಚರ್ಚೆಗಳು ಜೋರಾಗಿಯೇ ನಡೆದಿವೆ‌.

ABOUT THE AUTHOR

...view details