ಬೆಳಗಾವಿ :ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಆರ್ ವಿ ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಹೆಚ್ ಎಂ ರೇವಣ್ಣ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕರಾದ ಶಾಮ್ ಘಾಟಗೆ, ವೀರಕುಮಾರ್ ಪಾಟೀಲ್, ಕಾಕಾಸಾಬ್ ಪಾಟೀಲ್ ಸೇರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಭೆಯಲ್ಲಿದ್ದರು.
ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಡಿಕೆಶಿ ಅಧ್ಯಕ್ಷತೆಯಲ್ಲಿ ಸಭೆ ನಾಳೆ (ಸೋಮವಾರ) ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮೊದಲು ಇಂದು ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಕಳೆದುಕೊಂಡ ಕಾಂಗ್ರೆಸ್ ನೆಲೆಯನ್ನ ಪುನಃ ವಶಕ್ಕೆ ಪಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಏಂಟು ವಿಧಾನಸಭೆ ಕ್ಷೇತ್ರಗಳು ಬರಲಿವೆ. ಕೇವಲ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದ ಐದು ಕ್ಷೇತ್ರದಲ್ಲಿ ಮಾಜಿ ಶಾಸಕರಿಗೆ ಮತ್ತು ಮಾಜಿ ಮಂತ್ರಿಗಳಿಗೆ ಜವಾಬ್ದಾರಿ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಉಪಚುನಾವಣೆಯಲ್ಲಿ ಬಿಜೆಪಿಯನ್ನು ಯಾವ ಯಾವ ವಿಷಯಗಳಲ್ಲಿ ಕೌಂಟರ್ ಮಾಡಬೇಕು. ಯಾವ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಪ್ರಚಾರ ಮಾಡಬೇಕು. ಮರಾಠಿ ಮತಗಳನ್ನು ಹೇಗೆ ಸೆಳೆಯಬೇಕು ಅನ್ನೋದರ ಬಗ್ಗೆಯೂ ಚರ್ಚೆ ನಡೆದಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಡಿಕೆಶಿ ನೇತೃತ್ವದ ತಂಡ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಮಾಸ್ಟರ್ ಪ್ಲ್ಯಾನ್ನ ಈಗಾಗಲೇ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಓದಿ:ಜೈಕಾರ, ಧಿಕ್ಕಾರ, ಹೂವಿನಹಾರ ಎಲ್ಲ ಕ್ರೀಡಾ ಮನೋಭಾವದಿಂದಲೇ ತೆಗೆದುಕೊಳ್ತೀನಿ.. ಡಿಕೆಶಿ
ನಾಳೆಯೂ ಮಹತ್ವದ ಸಭೆ :ನಾಳೆ ಸೋಮವಾರ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಕಾಂಗ್ರೆಸ್‌ನ ನಾಯಕರ ದಂಡೆ ಬೆಳಗಾವಿಗೆ ಹರಿದು ಬರುತ್ತಿದೆ.
ನಾಮಪತ್ರ ಸಲ್ಲಿದ ಬಳಿಕವೂ ಸ್ಥಳೀಯ ಕಾಂಗ್ರೆಸ್ ನಾಯಕರ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಹೇಗಾದರೂ ಮಾಡಿ ಬಿಜೆಪಿ ತೆಕ್ಕೆಗೆ ಇರುವ ಕ್ಷೇತ್ರವನ್ನು ಮರಳಿ ಪಡೆಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಡಿಕೆಶಿಗೆ ಬಿಗಿ ಪೊಲೀಸ್ ಭದ್ರತೆ :ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕೆಶಿಗೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಭಾವುಟ ಪ್ರದರ್ಶಿಸಿ ತೀವ್ರ ವಿರೋಧಿಸಿದ ಹಿನ್ನೆಲೆ, ನಾಳೆ ನಡೆಯುವ ನಾಮಪತ್ರ ಸಲ್ಲಿಕೆ ವೇಳೆ ಡಿಕೆಶಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿಕೆಶಿ ಬೆಳಗಾವಿಯ ಪ್ರತಿಷ್ಠಿತ ಹೋಟೆಲ್ನಲ್ಲಿದ್ದು, ಅಲ್ಲಿಂದ ಅವರನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕಾಂಗ್ರೆಸ್ ಭವನಕ್ಕೆ ಕರೆತರಲಿದ್ದಾರೆ.