ಅಥಣಿ (ಬೆಳಗಾವಿ): ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಪೋಟಕ ಸುದ್ದಿ ಆಘಾತಕಾರಿ. ಈ ದುರಂತ ನಡೆಯಬಾರದಿತ್ತೆಂದು ಡಿಸಿಎಂ ಲಕ್ಷ್ಮಣ್ ಸವದಿ ವಿಷಾದ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು.
ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಏತ ನೀರಾವರಿ ಯೋಜನೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣವನ್ನು ಸಿಎಂ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದಾರೆ. ತನಿಖೆ ಹಂತದಲ್ಲಿರುವಾಗ ಪ್ರಕರಣದ ಕುರಿತು ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇರುವವರು ಪ್ರತಿಯೊಂದಕ್ಕೂ ವಿರೋಧ ಮಾಡುತ್ತಿರುವುದು ಸರಿ ಅಲ್ಲವೆಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.
ಎರಡನೇ ಹಂತದ ಸಚಿವ ಸಂಪುಟದಲ್ಲಿ ಖಾತೆ ಅದಲು-ಬದಲು ಆಗಿದ್ದರಿಂದ ಬಿಎಸ್ವೈ ಸರ್ಕಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿನ್ನೆವರೆಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಎಲ್ಲವೂ ಸರಿಯಾಗಿದೆ. ನಾಲ್ಕು ಜನ ಸಚಿವರಿಗೆ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲವೆಂದು ಪ್ರತಿಕ್ರಿಯೆ ನೀಡಿದರು.
ಭೋವಿ ಸಮಾಜದವರು, ಕಲ್ಲು ಗಣಿಗಾರಿಕೆ ಮಾಡುವ ಹಿಂದುಳಿದ ವರ್ಗಗಳ ಜನರು, ಜಮೀನುಗಳಿಗೆ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ನಾನು ಶಾಸಕನಾದ ಸಮಯದಲ್ಲಿ ಈ ಯೋಜನೆ ರೂಪಿಸಲಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಈ ಯೊಜನೆ ಕಾರ್ಯರೂಪಕ್ಕೆ ಬರಲು ವಿಳಂಬವಾಗಿದೆ. ಸದ್ಯ ನಮ್ಮ ಸರ್ಕಾರದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಸಚಿವ ಮಾಧುಸ್ವಾಮಿ ಆಗಮಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಬಂದಿಲ್ಲ ಎಂದು ತಿಳಿಸಿದರು.
ಈ ಯೋಜನೆ ಅಂದಾಜು 21 ಕೋಟಿ ರೂಪಾಯಿದ್ದಾಗಿದ್ದು, ಕೃಷ್ಣಾ ನದಿಯಿಂದ 24 ಕಿಲೋ ಮೀಟರ್ ದೂರದ ಏತ ನೀರಾವರಿ ಯೋಜನೆಯಾಗಿದೆ. 550 ಎಕರೆಗೆ ನೀರಾವರಿ ಆಗುವುದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ ಸ್ಫೋಟ ಪ್ರಕರಣ: ಕಲ್ಲು ಕ್ವಾರಿಯ ಮಾಲೀಕ ಸೇರಿ ಮೂವರ ವಿಚಾರಣೆ