ಕರ್ನಾಟಕ

karnataka

ETV Bharat / state

ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ‌ ಶೀಘ್ರ ಪೂರ್ಣ: ಡಿಸಿಎಂ - ಈಟಿವಿ ಭಾರತ್ ಕನ್ನಡ

ಹೊಸ ತಂತ್ರಜ್ಞಾನದ ಮೂಲಕ ಮತ್ತೆ ನೀರಾವರಿ ಸೌಲಭ್ಯ ಕಲ್ಪಿಸಲು ವಿವರವಾದ ಅಂದಾಜು ಪಟ್ಟಿ ತಯಾರಿಸುವ ಜವಾಬ್ದಾರಿಯನ್ನು ಸರ್ವೇ ಸಂಸ್ಥೆಗೆ ನೀಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ ಕೆ‌ ಶಿವಕುಮಾರ್
ಡಿಸಿಎಂ ಡಿ ಕೆ‌ ಶಿವಕುಮಾರ್

By ETV Bharat Karnataka Team

Published : Dec 12, 2023, 5:08 PM IST

ಡಿಸಿಎಂ ಡಿ ಕೆ‌ ಶಿವಕುಮಾರ್

ಬೆಂಗಳೂರು/ ಬೆಳಗಾವಿ : “ರೇಣುಕಾ ಏತ ನೀರಾವರಿ, ಎಡಗಟ್ಟಿ ಏತ ನೀರಾವರಿ, ಸಿಂಗಾರೋಪ್ ಏತ ನೀರಾವರಿ ಯೋಜನೆಗಳ ಹಳೆಯ‌ ರಿವರ್ ಸೈಪನ್ ಬದಲಾಗಿ ಹೊಸ ತಂತ್ರ‌ಜ್ಞಾನದ ಮೂಲಕ ನೀರಾವರಿ ಸೌಲಭ್ಯವನ್ನು ಮತ್ತೆ ಒದಗಿಸಲಾಗುವುದು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.

ಇಂದು ಪ್ರಶ್ನೋತ್ತರ ಕಲಾಪದ ವೇಳೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ್ ವಸಂತ್ ವೈದ್ಯ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಹೊಸ ತಂತ್ರಜ್ಞಾನದ ಮೂಲಕ ಮತ್ತೆ ನೀರಾವರಿ ಸೌಲಭ್ಯ ಕಲ್ಪಿಸಲು ವಿವರವಾದ ಅಂದಾಜು ಪಟ್ಟಿ ತಯಾರಿಸುವ ಜವಾಬ್ದಾರಿಯನ್ನು ಸರ್ವೆ ಸಂಸ್ಥೆಗೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ರೇಣುಕಾ ಏತ ನೀರಾವರಿ, ಎಡಗಟ್ಟಿ ಏತ ನೀರಾವರಿ, ಸಿಂಗಾರೋಪ್ ಏತ ನೀರಾವರಿ ಯೋಜನೆಗಳ ರಿವರ್ ಸೈಪನ್ ಹಾಗೂ ಇತರ ದುರಸ್ತಿ ಕಾರ್ಯಗಳಿಗೆ ತಾಂತ್ರಿಕ ಶಕ್ಯತೆ ಮತ್ತು ಅನುದಾನದ ಲಭ್ಯತೆ ಅನುಸಾರ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪ್ರತ್ಯೇಕ ಸಭೆ ನಡೆಸಲಾಗಿದೆ. ಪೈಪ್ ಹಾಗೂ ಹಲವು ದುರಸ್ತಿ ಕಾರ್ಯಗಳಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಯಭಾಗದ 39 ಕೆರೆಗಳಿಗೆ ನೀರು‌ ತುಂಬುವ ಕಾಮಗಾರಿ ಜೂನ್ ವೇಳೆಗೆ ಪೂರ್ಣ : ರಾಯಭಾಗದ ಶಾಸಕ‌ ದುರ್ಯೋಧನ ಐಹೊಳೆ ಅವರು ಚಿಕ್ಕೋಡಿ ಹಾಗೂ ರಾಯಭಾಗದ ತಾಲೂಕಿನ ಕೆರೆಗಳಿಗೆ ನೀರು‌‌ ತುಂಬಿಸುವ ಕಾಮಗಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಯಭಾಗದ 39 ಕೆರೆ‌ಗೆ ನೀರು ತುಂಬಿಸುವ ಕಾಮಗಾರಿ ಶೇ. 85 ರಷ್ಟು ಪೂರ್ಣಗೊಂಡಿದ್ದು‌, ಬಾಕಿ‌ ಶೇ 15ರಷ್ಟು ಕಾಮಗಾರಿ‌ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

100 ಕೋಟಿ ರೂ. ವೆಚ್ಚದಲ್ಲಿ‌ ಕಾಮಗಾರಿ‌ ಈಗಾಗಲೇ ಪ್ರಾರಂಭಗೊಂಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವುಕ್ಕೂ ಅನುಮೋದನೆ ನೀಡಲಾಗಿದೆ‌. 2 ಎಕರೆ 38 ಗುಂಟೆ ಜಾಗದ ಬಗ್ಗೆ ದಾವೆ‌ ಹೂಡಲಾಗಿದ್ದು, ಇದು ಕೂಡ ಬಗೆಹರಿಯುವ ಹಂತದಲ್ಲಿದೆ. ಜಾಕ್ವೆಲ್, ಪಂಪ್ ಹೌಸ್ ನಿರ್ಮಾಣದ ಸ್ಥಳದಲ್ಲಿ‌ ರೈತರು ತಕರಾರು ಮಾಡಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಜೂನ್ ಒಳಗಾಗಿ ಯೋಜನೆ ಪೂರ್ಣಗೊಳಿಸುವ ಭರವಸೆ ಇಟ್ಟುಕೊಂಡಿದ್ದೇವೆ. ಸ್ಥಳೀಯ ಶಾಸಕರಾದ ನಿಮ್ಮ ಸಹಕಾರವೂ ಅಗತ್ಯವಿದೆ ಎಂದರು.

ನಂತರ ಶಾಸಕರು, ಯೋಜನೆಗೆ ಜಮೀನು ನೀಡಿದವರಿಗೆ ಸರಿಯಾದ ಪರಿಹಾರ ತಲುಪಿಲ್ಲ ಎಂದು ಗಮನ ಸೆಳೆದಾಗ, ಅಧಿಕಾರಿಗಳನ್ನು ನಿಮ್ಮ‌ ಬಳಿ‌ ಕಳುಹಿಸುತ್ತೇನೆ. ನೀವು, ರೈತರು ಮತ್ತು ಅಧಿಕಾರಿಗಳು ಸಭೆ ಸೇರಿ ಸಮಸ್ಯೆ ಬಗೆಹರಿಸಬೇಕು. ಶೇ. 85 ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಯೋಜನೆ ಪೂರ್ಣಗೊಳಿಸುವುದೇ ನಮ್ಮ ಆದ್ಯತೆ ಎಂದು ಹೇಳಿದರು.

2024 ರ ಡಿಸೆಂಬರ್ ಒಳಗೆ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣ:ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರು ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಬಗ್ಗೆ ಕೇಳಿದಾಗ ಉತ್ತರಿಸಿದ ಡಿ. ಕೆ ಶಿವಕುಮಾರ್, ಅಕ್ಟೋಬರ್ 10, 2000 ರಂದು 16 ಕೋಟಿಗೆ ಈ ಯೋಜನೆ ಅನುಮತಿ ನೀಡಲಾಗಿತ್ತು. ಪರಿಷ್ಕೃತ ಅಂದಾಜು ಮೊತ್ತವನ್ನು 2001ರ ಜುಲೈ 4 ರಂದು 21.50 ಕೋಟಿಗೆ ಹಾಗೂ 2007ರ ಜುಲೈ 30ರಂದು 52.10 ಕೋಟಿಗೆ ಮಾರ್ಪಾಡು ಮಾಡಿ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದ್ದು, ಮೊದಲ ಹಂತವನ್ನು 2001ರಲ್ಲಿ ಆರಂಭಿಸಿ 2013ರಲ್ಲಿ ಚಾಲನೆಗೊಳಿಸಲಾಗಿದೆ. ಇದಕ್ಕೆ 22.65 ಕೋಟಿ ವೆಚ್ಚವಾಗಿದೆ ಎಂದರು.

ಎರಡನೇ ಹಂತದ ಯೋಜನೆಯ ಕಾಮಗಾರಿಗಳನ್ನು 2016ರ ಜನವರಿ 11 ರಂದು 8.09 ಕೋಟಿ ರೂ.ಗೆ ಗುತ್ತಿಗೆ ಮೊತ್ತಕ್ಕೆ ವಹಿಸಿ ಆರಂಭಿಸಲಾಗಿತ್ತು. ಭೂಸ್ವಾಧೀನ ಸಮಸ್ಯೆ ಹಾಗೂ ಮುಖ್ಯ ನಾಲೆಯ ಸರಪಳಿ 2.60 ಕಿ.ಮೀ ನಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 373 ಕ್ರಾಸಿಂಗ್ ಕಾಮಗಾರಿ ವಿಳಂಬವಾಗಿರುತ್ತದೆ. ಈವರೆಗೂ 5.99 ಕೋಟಿ ವೆಚ್ಚವಾಗಿದ್ದು, ಇನ್ ಟೇಕ್ ಚಾನೆಲ್, ಸಂಪ್ ವೆಲ್, ಪಂಪ್ ಹೌಸ್, ರೈಸಿಂಗ್ ಮೈನ್, ಸಿಸ್ಟರ್ನ್, ಪಂಪು ಮತ್ತು ಮೋಟಾರ್​ಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.

ಒಟ್ಟು 38 ಸಿ.ಡಿ ಕಾಮಗಾರಿಗಳ ಪೈಕಿ 16 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 22 ಕಾಮಗಾರಿಗಳು ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿವೆ. ಈ ಕಾಮಗಾರಿಯ ಪ್ರಗತಿ ಅನುಸಾರ ವೆಚ್ಚ ಭರಿಸಲಾಗುತ್ತಿದ್ದು, ಅವಶ್ಯ ಇರುವ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಕಾಮಗಾರಿಯನ್ನು ಡಿಸೆಂಬರ್ 2024ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.

ಇದನ್ನೂ ಓದಿ :ಎಸ್​ಸಿಎಸ್​ಪಿ - ಟಿಎಸ್​ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಂತೆ ನಿಯಂತ್ರಿಸುವ ತಿದ್ದುಪಡಿ ವಿಧೇಯಕ ಮಂಡನೆ

ABOUT THE AUTHOR

...view details