ಬೆಳಗಾವಿ:ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಹೋದ ವೃದ್ಧ ರೈತನ ಕತ್ತು ಹಿಡಿದು ಹೊರಗೆ ಹಾಕಲು ಯತ್ನಿಸಿದ ಘಟನೆ ಬೆಳಗಾವಿ ಡಿಸಿ ಕಚೇರಿಯ ಭೂಮಿ ವಿಭಾಗದಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ಮರಕಟ್ಟಿ ಗ್ರಾಮದ ಬಸನಗೌಡ ಭರಮಗೌಡರ್ ವೃದ್ಧ ರೈತನ ಮೇಲೆ ಡಿಸಿ ಕಚೇರಿ ಸಿಬ್ಬಂದಿಗಳು ಕತ್ತು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಕಳೆದ 31 ವರ್ಷಗಳಿಂದಲೂ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಡಿಸಿ ಕಚೇರಿಗೆ ಅಲೆದು ಅಲೆದು ಸಾಕಾಗಿ ತಮ್ಮ ಕೆಲಸ ಮಾಡುಕೊಡುವಂತೆ ಬಸನಗೌಡ ಕಚೇರಿ ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಕಚೇರಿ ಸಿಬ್ಬಂದಿಯೋರ್ವ ಕತ್ತು ಹಿಡಿದು ಹೊರ ಹಾಕಲು ಯತ್ನಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ವೃದ್ಧನ ಮೇಲೆ ಡಿಸಿ ಕಚೇರಿ ಸಿಬ್ಬಂದಿಯಿಂದ ಹಲ್ಲೆ ಆರೋಪ ರೈತ ಬಸನಗೌಡ ಹೇಳುವ ಪ್ರಕಾರ, ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಹತ್ತಿರ ಅವರ 18 ಎಕರೆ ಜಮೀನಿದೆ. ಅದನ್ನು ಸರ್ಕಾರಿ ಅಧಿಕಾರಿಗಳು ಜಮೀನನ್ನು ಪಿಡಬ್ಲ್ಯೂಡಿ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದಾಗ ಮಾಲೀಕರು ಹೆಸರನ್ನು ಸೇರ್ಪಡೆ ಮಾಡುವಂತೆ ಹೈಕೋರ್ಟ್ ಐದು ಬಾರಿ ನಿರ್ದೇಶ ಮಾಡಿದೆಯಾದ್ರೂ ನ್ಯಾಯಾಲಯದ ಆದೇಶಕ್ಕೂ ಅಧಿಕಾರಿಗಳು ಯಾವುದೇ ಮನ್ನಣೆ ನೀಡುತ್ತಿಲ್ಲ. ಇದರಿಂದಾಗಿ ಕೆಲವರು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಹೈಕೋರ್ಟ್ ನಿರ್ದೇಶನದ ಪ್ರಕಾರ 18 ಎಕರೆ ಜಮೀನು ಮಾಲೀಕರ ಹೆಸರಿಗೆ ದಾಖಲಿಸಿ ಸರ್ವೇ ಮಾಡಬೇಕು. ನಂತರ ಮುಳುಗಡೆ ಆಗಿರುವ ಜಮೀನನ್ನು ಸರ್ವೇ ಮಾಡಬೇಕು. ಆದ್ರೆ, ಇದ್ಯಾವುದನ್ನು ಮಾಡದ ಅಧಿಕಾರಿಗಳು ಎಲ್ಲ 18 ಎಕರೆ ಜಮೀನನ್ನು ಪಿಡಬ್ಲ್ಯೂಡಿಯಾಗಿ ಪರಿವರ್ತನೆ ಮಾಡಿದ್ದಾರೆ. ಇದಲ್ಲದೇ ರಾಷ್ಟ್ರೀಯ ಹೆದ್ದಾರಿಗೆ ಮೂರು ಎಕರೆ ಜಮೀನು ಸರ್ಕಾರದ ಒತ್ತುವರಿ ಮಾಡಿಕೊಂಡಿದೆ.
ಅದರಲ್ಲಿ ಕೇವಲ 21 ಗುಂಟೆ ಜಮೀನಿಗೆ ಮಾತ್ರ ಹಣ ನೀಡಿದೆ. ಈ ಕುರಿತ ಮಾಹಿತಿ ಕೇಳಿದರು ಯಾರೂ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಕಳೆದ 31 ವರ್ಷಗಳಿಂದ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.