ಬೆಳಗಾವಿ :ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ವೃದ್ಧರು, ಅಂಗವಿಕಲರು ಸೇರಿ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತೋಡಿಕೊಂಡರು. ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಜಿಲ್ಲಾಡಳಿತದಿಂದ 8 ಕೇಂದ್ರಗಳನ್ನು ತೆರೆಯಲಾಗಿತ್ತು. ಅರ್ಜಿ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಿದ ಜನರು, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ವಿಧಾನಪರಿಷತ್ ಹಿರಿಯ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ವಿಶ್ವಾಸ ವೈದ್ಯ ಅವರ ಬಳಿಯೂ ತಮ್ಮ ಸಮಸ್ಯೆ ಹೇಳಿಕೊಂಡರು. ಈ ವೇಳೆ ಆಯಾ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಅವರಿಗೆ ಇವರ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಹೀಗೆ ತಮ್ಮ ಬೇಡಿಕೆ ಈಡೇರಿಸುವಂತೆ ಅರ್ಜಿ ಸಲ್ಲಿಸಲು ಆಗಮಿಸಿದ್ದ ವಿಶೇಷಚೇತನರಾದ ದಯಾನಂದ ಮಾವಿನಕಟ್ಟಿ ಮತ್ತು ಮಹಾನಂದಾ ಅವರು ಈಟಿವಿ ಭಾರತ್ ಜೊತೆಗೆ ಮಾತನಾಡಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿ ಕಳೆದ 13-15 ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ. ಮೊದಲು 700 ರೂ. ತಿಂಗಳಿಗೆ ಗೌರವಧನ ನೀಡುತ್ತಿದ್ದರು. ಈಗ 9 ಸಾವಿರ ಬರುತ್ತಿದೆ. ಇಂದಿನ ಬೆಲೆ ಏರಿಕೆ ಕಾಲದಲ್ಲಿ ಇದು ಯಾವುದಕ್ಕೂ ಸಾಲುತ್ತಿಲ್ಲ. ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸುವ ನಮಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಬೇಕು. ಹಾಗಾಗಿ, ನಮ್ಮ ವೇತನ ಹೆಚ್ಚಿಸಬೇಕು ಮತ್ತು ಖಾಯಂಗೊಳಿಸುವಂತೆ ಆಗ್ರಹಿಸಿದರು.
ಇನ್ನು ಬೆಳಗಾವಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಕೂಲಿಕಾರರು ನರೇಗಾ ಯೋಜನೆಯಡಿ ನಮಗೆ ಸರಿಯಾಗಿ ಕೂಲಿ ಕೊಡುತ್ತಿಲ್ಲ. ಕೇವಲ 20 ದಿನ ಕೂಲಿ ನೀಡಿದ್ದು, ಮಾಡಿದ ಕೆಲಸಕ್ಕೆ ವೇತನವನ್ನೂ ಕೊಡುತ್ತಿಲ್ಲ. ಹಾಗಾಗಿ, ನೂರು ದಿನ ಕೂಲಿ ಮತ್ತು ಕಾರ್ಮಿಕರ ಕಾರ್ಡ್ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮಗೂ ಒದಗಿಸಬೇಕು. ನಮ್ಮ ಮಕ್ಕಳಿಗೆ ಶಿಷ್ಯವೇತನ, ಲ್ಯಾಪ್ಟಾಪ್ ವಿತರಣೆ ಸೇರಿ ಇನ್ನಿತರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ವಿಠಲ ದೇಸಾಯಿ ಮತ್ತು ಮಂಜುಳಾ ಅವರು ಒತ್ತಾಯಿಸಿದರು.
ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಎಂ ಸನದಿ ಮಾತನಾಡಿ, 2006ರ ಪೂರ್ವದಲ್ಲಿ ಅನುದಾನ ರಹಿತವಾಗಿ ನೇಮಕಾತಿಗೊಂಡು 2006ರ ನಂತರ ವೇತನಾನುದಾನಕ್ಕೆ ಒಳಪಟ್ಟು ನಿವೃತ್ತಿಯಾದ ಶಿಕ್ಷಕರು ತೀರಾ ಸಂಕಷ್ಟದಲ್ಲಿದ್ದೇವೆ. ನಮಗೆ ಇತ್ತ ಒಪಿಎಸ್ ಸೌಲಭ್ಯವೂ ಸಿಕ್ಕಿಲ್ಲ. ಅತ್ತ ಎನ್.ಪಿ.ಎಸ್ ಸೌಲಭ್ಯದಿಂದಲೂ ನಾವು ವಂಚಿತರಾಗಿದ್ದೇವೆ. ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ, ಪಿಂಚಣಿ ಕೊಟ್ಟು ನಮ್ಮನ್ನು ಕಾಪಾಡಿ ಎಂದು ಸರ್ಕಾರಕ್ಕೆ ಅಂಗಲಾಚಿದರು.