ಚಿಕ್ಕೋಡಿ (ಬೆಳಗಾವಿ): ಜೈನಾಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದ ಆಶ್ರಮದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪ್ರಕರಣದ ಎಫ್ಐಆರ್ (ಪ್ರಥಮ ಮಾಹಿತಿ ವರದಿ)ನಲ್ಲಿ ಉಲ್ಲೇಖಿಸಲಾಗಿದೆ.
ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಂದು ಮಠದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಆಶ್ರಮದವರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನದ ಬಳಿಕ ಮೃತದೇಹ ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಪತ್ತೆಯಾಗಿತ್ತು. ಹಂತಕರು ಸ್ವಾಮೀಜಿಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಕೊಳವೆ ಬಾವಿಗೆ ಎಸೆದಿದ್ದರು. ಈ ಸಂಬಂಧ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಹಂತಕರ ಕ್ರೌರ್ಯ: ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನಸಾಬ ದಲಾಯತ್ ಜೊತೆಯಾಗಿಯೇ ಜೈನಮುನಿಯನ್ನು ವಿದ್ಯುತ್ ಶಾಕ್ ನೀಡಿ ಕೊಲ್ಲಲು ಪ್ರಯತ್ನಪಟ್ಟಿದ್ದರು. ಆದರೆ ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ, ಟವೆಲ್ನಿಂದ ಕುತ್ತಿಗೆ ಬಿಗಿದು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಆ ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್ನಲ್ಲಿ ಸುಮಾರು 35 ಕಿಲೋಮೀಟರ್ ದೂರದ ಕಡಕಬಾವಿ ಗ್ರಾಮಕ್ಕೆ ಸಾಗಿಸಿ ಕೊಳವೆ ಬಾವಿಗೆ ಹಾಕಿದ್ದಾರೆ. ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಈ ರೀತಿ ಮಾಡಿದ್ದಾರೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ತಿಳಿಸಲಾಗಿದೆ.