ಬೆಳಗಾವಿ : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿಯು ಉಗ್ರ ಅಫ್ಸರ್ ಪಾಷಾ ಜತೆ ಸಂಪರ್ಕದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜಯೇಶ್ ಪೂಜಾರಿಯು ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದಾಗ ಪಾಷಾ ಜತೆಗೆ ಬೆಳಗಾವಿ ಜೈಲಿನಲ್ಲಿದ್ದ. ಇದು ಭಯೋತ್ಪಾಕರ ಕುಮ್ಮಕ್ಕಿನ ಮೇಲೆ ನಡೆದ ಬೆದರಿಕೆಯೇ ಎಂಬ ಕುರಿತು ತನಿಖೆ ಚುರುಕುಗೊಳಿಸಲಾಗಿದೆ. ಹೀಗಾಗಿ, ಪಾಷಾನನ್ನು ಬಂಧಿಸಲು ನಾಗ್ಪುರ ಪೊಲೀಸರ ತಂಡವು ಶುಕ್ರವಾರ ಕರ್ನಾಟಕಕ್ಕೆ ಬಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸಚಿವ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹಾರಾಷ್ಟ್ರದ ನಾಗ್ಪುರ ಎಟಿಎಸ್ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಮಂಗಳೂರು ಮೂಲದ ಜಯೇಶ ಪೂಜಾರಿ ಎಂಬ ಕೈದಿ, ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಜ. 14 ರಂದು ಕರೆ ಮಾಡಿ, 100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಒಂದು ವೇಳೆ ಹಣ ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಈ ಕುರಿತು ಮಹಾರಾಷ್ಟ್ರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದರಿಂದ ಈ ಕರೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಂದಿದೆ ಎಂದು ಖಚಿತಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಆದರೆ, ಈ ಘಟನೆ ಮಾಸುವ ಮುನ್ನವೇ ಮಾ. 21 ರಂದು ಎರಡನೇ ಬಾರಿಗೆ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಮತ್ತೆ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದನು.