ಬೆಳಗಾವಿ: ಕೋವಿಡ್-19 ಪತ್ತೆ ಮತ್ತು ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳಿಗಾಗಿ ಸ್ಥಾಪಿಸಲಾಗಿರುವ ಕೋವಿಡ್-19 ವಾರ್ ರೂಮ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಇಂದು ಚಾಲನೆ ನೀಡಿದರು.
ಇಲ್ಲಿನ ವಿಶ್ವೇಶ್ವರಯ್ಯ ನಗರದ ಸ್ಮಾರ್ಟ್ ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದಲ್ಲಿ ಕೋವಿಡ್-19 ವಾರ್ ರೂಮ್ ಆರಂಭಿಸಲಾಗಿದೆ. ವಾರ್ ರೂಮ್ ಕಾರ್ಯಸ್ವರೂಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು, ವಾರ್ ರೂಮ್ ನಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಕೊರೊನಾ ನಿಯಂತ್ರಣಕ್ಕೆ ಸಮರ್ಥವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ವಾರ್ ರೂಮ್ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ, ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ ಮಾಡಲು, ಜನರು ಮತ್ತು ವಾಹನ ಸಂಚಾರದ ಮೇಲೆ ವಾರ್ ರೂಮ್ ಮೂಲಕ ನಿಗಾ ವಹಿಸಲಾಗುತ್ತದೆ ಎಂದು ವಿವರಿಸಿದರು. ಮೊಬೈಲ್ ಆ್ಯಪ್, ವಿಡಿಯೋ ಫುಷ್ ಮತ್ತು ಸರ್ವೇಲನ್ಸ್, ಕಸ್ಮೈಸ್ಡ್ ಡ್ಯಾಶ್ ಬೋರ್ಡ್, ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದವರನ್ನು ಮೊಬೈಲ್ ಸಂಖ್ಯೆ ಮೂಲಕ ಪತ್ತೆ ಹಚ್ಚಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಜನರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಸಂಗ್ರಹಿಸುವ ಮೂಲಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಬಳಸಲಾಗುತ್ತದೆ. ಕ್ವಾರಂಟೈನ್ ಕೇಂದ್ರಗಳು, ಕಂಟೈನ್ಮೆಂಟ್ ಝೋನ್ ಮತ್ತಿತರ ಕಡೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ವಾರ್ ರೂಮ್ ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇನ್ನೂ, ಕಂಟೈನ್ಮೆಂಟ್ ಝೋನ್ ಗಳಲ್ಲಿರುವ ಜನರು ದಿನಸಿ, ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಪಡೆಯಲು ಹೊರಗಡೆ ಬರದೇ ವಿಶೇಷ ಆಪ್ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ. ಎಚ್. ತಿಳಿಸಿದರು.