ಬೆಳಗಾವಿ :ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ವೈದ್ಯೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯ ಓಪಿಡಿ ಮೆಡಿಕಲ್ ವಾರ್ಡ್ ಸೀಲ್‌ಡೌನ್ ಮಾಡಲಾಗಿದೆ.
ಬಿಮ್ಸ್ ಆಸ್ಪತ್ರೆಯ ವೈದ್ಯೆಗೆ ಕೊರೊನಾ ಸೋಂಕು.. ಓಪಿಡಿ ಮೆಡಿಕಲ್ ವಾರ್ಡ್ ಸೀಲ್‌ಡೌನ್ ನಗರದ ಬೀಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವೈದ್ಯೆ ಮೆಡಿಕಲ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಇನ್ನೂರಕ್ಕೂ ಅಧಿಕ ಹೊರ ರೋಗಿಗಳ ತಪಾಸಣೆ ನಡೆಸಿದ್ದರು. ಆದರೆ, ಈಗ ವೈದ್ಯೆಗೇ ಸೋಂಕು ದೃಢಪಟ್ಟಿರುವುದರಿಂದ ಚಿಕಿತ್ಸೆ ಪಡೆದುಕೊಂಡಿದ್ದ ರೋಗಿಗಳಿಗೆ ಹಾಗೂ ಜೊತೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಸದ್ಯ ಇವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 15ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು, ವೈದ್ಯೆ ವಾಸವಿದ್ದ ಬೆಳಗಾವಿಯ ಸದಾಶಿವನಗರ ಕೂಡ ಸೀಲ್‌ಡೌನ್ ಮಾಡಲಾಗಿದೆ. ಆದರೆ, ಸದಾಶಿವ ನಗರದಲ್ಲಿ ಸೀಲ್‌ಡೌನ್ ಮಾಡಿ ಔಷಧಿ ಸಿಂಪಡಣೆ ಮಾಡದೇ ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ತೋರಿದ್ದಾರೆ ಎನ್ನಲಾಗಿದೆ. ಇದಲ್ಲದೇ ಒಂದೇ ಕಟ್ಟಡದಲ್ಲಿ ಕೋವಿಡ್ ಹಾಗೂ ಓಪಿಡಿ ವಾರ್ಡ್ ಇರುವ ಹಿನ್ನೆಲೆ ಬೀಮ್ಸ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಸಹ ಓಪಿಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಓಪಿಡಿ ವಿಭಾಗದ ಸಿಬ್ಬಂದಿ ಜೀವಭಯದಲ್ಲೇ ಕೆಲಸ ಮಾಡುತ್ತಿದ್ದಾರೆ.
ಇನ್ನು, ಬೀಮ್ಸ್ ಆಸ್ಪತ್ರೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೊರರೋಗಿಗಳು ಆಗಮಿಸುತ್ತಿದ್ದಾರೆ. ಮೇಲ್ಮಹಡಿಯಲ್ಲಿ ಕೊರೊನಾ ವಾರ್ಡ್, ಕೆಲಮಹಡಿಯಲ್ಲಿ ಹೆಚ್‌ಐವಿ ವಾರ್ಡ್ ಹಾಗೂ ಮಧ್ಯದ ಮಹಡಿಯಲ್ಲಿ ಹೊರ ರೋಗಿಗಳ ಘಟಕ ಇದೆ. ಹೀಗಾಗಿ ಹೊರಗೋಗಿಗಳ ಘಟಕ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ.