ಬೆಳಗಾವಿ: ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ ಇದೀಗ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ. ತಿಮ್ಮಾಪುರ ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದೆ. ವಿದ್ಯಾಗಮದ ಮೂಲಕ ವಠಾರದಲ್ಲಿ ಶಿಕ್ಷಣ ಪಡೆಯುತ್ತಿದ್ದ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 168 ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 191 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 23 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಉಳಿದ 168 ವಿದ್ಯಾರ್ಥಿಗಳಿಗೂ ಆತಂಕ ಶುರುವಾಗಿದೆ. ಪಾಠ ಮಾಡಿದ 6 ಜನ ಶಿಕ್ಷಕರಿಗೂ ಕೊರೊನಾ ಸೋಂಕು ತಗುಲಿರುವ ಶಂಕೆ ಮೂಡಿದೆ.
ಸೋಂಕು ದೃಢಪಟ್ಟ ಕಾರಣ 23 ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮತ್ತೊಂದೆಡೆ ಪಾಠ ಮಾಡಲು ಬಂದಿದ್ದ ಶಿಕ್ಷಕರನ್ನೇ ಗ್ರಾಮಸ್ಥರು ಊರಿನಿಂದ ಹೊರಹಾಕಿದ್ದಾರೆ. ಶಿಕ್ಷಕರು ಸೇರಿದಂತೆ ಗ್ರಾಮಕ್ಕೆ ಯಾರೂ ಕೂಡ ಬರದಂತೆ ಗ್ರಾಮಸ್ಥರು ನಿಷೇಧ ಹೇರಿದ್ದಾರೆ.
ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದನ್ನು ಗುರುತಿಸುವುದೇ ತಾಲೂಕಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಒಂದೆಡೆ ಶಾಲೆ ಆರಂಭಿಸಬೇಕೇ? ಬೇಡವೇ? ಎಂಬ ಗೊಂದದಲ್ಲಿ ಸರ್ಕಾರ ಇದೆ. ವಿದ್ಯಾಗಮದ ಮೂಲಕ 23 ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದ್ದು, ಶಾಲೆ ಆರಂಭಿಸಿದ್ರೆ ಪರಿಸ್ಥಿತಿ ಹೇಗೆ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.