ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಬೆಳಗಾವಿಯಲ್ಲಿ ವಿದ್ಯುತ್ ಚಿತಾಗಾರ ಇಲ್ಲದ ಕಾರಣ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕಟ್ಟಿಗೆ ಮೂಲಕವೇ ಜಿಲ್ಲಾಡಳಿತ ನಿರ್ವಹಿಸುತ್ತಿದೆ.
ಕಳೆದ ವರ್ಷವೂ ಜಿಲ್ಲೆಯ ಅನೇಕರು ಕೊರೊನಾದಿಂದ ಮೃತರಾಗಿದ್ದಾರೆ. ಹೀಗಾಗಿ ಸೋಂಕಿತರ ಅಂತ್ಯಕ್ರಿಯೆಗೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನವನ್ನು ಜಿಲ್ಲಾಡಳಿತ ಮೀಸಲಿಟ್ಟಿತ್ತು. ನಗರದ ವಡಗಾಂವ, ಶಹಾಪುರ, ಸದಾಶಿವನಗರ, ಟಿಳಕವಾಡಿ ಸೇರಿದಂತೆ ಒಟ್ಟು 5 ಸ್ಮಶಾನಗಳು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ ವರ್ಷ ಕೊರೊನಾಗೆ 300ಕ್ಕೂ ಅಧಿಕ ಸೋಂಕಿತರು ಮೃತರಾಗಿದ್ದರು. ಈ ವರ್ಷವೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಸದಾಶಿವ ನಗರ ಸ್ಮಶಾನ ಜೊತೆಗೆ ಇನ್ನುಳಿದ ಸ್ಮಶಾನಗಳನ್ನು ಸೋಂಕಿತರ ಅಂತ್ಯಕ್ರಿಯೆಗೆ ಬಳಸಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಬೆಳಗಾವಿಯಲ್ಲಿ ವಿದ್ಯುತ್ ಚಿತಾಗಾರವಿಲ್ಲದೆ ಕಟ್ಟಿಗೆ ಬಳಸಿ ಸೋಂಕಿತರ ಅಂತ್ಯಕ್ರಿಯೆ ವಾಯು ಮಾಲೀನ್ಯಕ್ಕೆ ಬ್ರೇಕ್ ಹಾಕದ ಪಾಲಿಕೆ
ಅಭಿವೃದ್ಧಿ ಹೊಂದಿರುವ ನಗರಗಳಲ್ಲಿ ಸೋಂಕಿತರ ಅಂತ್ಯಕ್ರಿಯೆಗೆ ವಿದ್ಯುತ್ ಚಿತಾಗಾರ ಬಳಕೆ ಮಾಡುತ್ತಿವೆ. ಕೇಂದ್ರದ ಸ್ಮಾರ್ಟ್‍ಸಿಟಿ ಹಾಗೂ ಅಮೃತ ಸಿಟಿಯಂತಹ ಯೋಜನೆಗಳಿಗೆ ಬೆಳಗಾವಿ ಒಳಪಟ್ಟಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನವೂ ನಗರಕ್ಕೆ ಹರಿದುಬರುತ್ತಿದೆ. ನಗರ ಸ್ಮಾರ್ಟ್ ಆಗಿ ಪರಿವರ್ತನೆಗೊಳ್ಳುತ್ತಿದ್ದರೂ, ಸ್ಮಶಾನಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಕಾರ್ಯ ಪಾಲಿಕೆ ಮುಂದಾಗಿಲ್ಲ.
ನಿತ್ಯ 40ಕ್ಕೂ ಅಧಿಕ ಸೋಂಕಿತರು ಸಾವನಪ್ಪುತ್ತಿದ್ದಾರೆ. ಒಂದು ಶವಸಂಸ್ಕಾರಕ್ಕೆ 10 ಟನ್ ಕಟ್ಟಿಗೆ ಬೇಕು. ನಿತ್ಯ ಅಂತ್ಯಸಂಸ್ಕಾರಕ್ಕೆ ಬೆಳಗಾವಿಯಲ್ಲಷ್ಟೇ 400 ಟನ್ ಕಟ್ಟಿಗೆ ಬಳಸಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಮಾತ್ರ ಪಾಲಿಕೆ ಹಿಂದೇಟು ಹಾಕುತ್ತಿದೆ. ಪಾಲಿಕೆ ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಲು ಸಾಲು ಶವಸಂಸ್ಕಾರ
ಕಳೆದ 15 ದಿನಗಳಿಂದ ನಗರದಲ್ಲಿ 800ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೇ ಮೃತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸದಾಶಿವನಗರದ ಸ್ಮಶಾನದಲ್ಲಿ ಏಕಕಾಲಕ್ಕೆ 10-15 ಶವಗಳ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಬಳಸಲಾಗುತ್ತಿದ್ದು, ಅಂತ್ಯಕ್ರಿಯೆ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ. ಒಂದು ಶವ ಸುಡಲು ಅಂದಾಜು ಎರಡರಿಂದ ಮೂರು ಗಂಟೆ ಸಮಯ ಹಿಡಿಯುತಿದ್ದು, ಮೃತರ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಸ್ಮಶಾನದ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಡೀಸೆಲ್ ಮೂಲಕ ಕಾರ್ಯನಿರ್ವಹಿಸುವ ಚಿತಾಗಾರ ಇದೆ. ಆದರೆ, ಇಂಧನ ಬೆಲೆ ಗಗನಕ್ಕೆ ಏರಿರುವುದರಿಂದ ಡಿಸೆಲ್ ಯಂತ್ರವನ್ನು ಜಿಲ್ಲಾಡಳಿತ ಬಳಸುತ್ತಿಲ್ಲ. ಹೀಗಾಗಿ ಕಟ್ಟಿಗೆ ಮೂಲಕವೇ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚಾದರೆ ಕಟ್ಟಿಗೆ ಮೂಲಕ ಅಂತ್ಯಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ:ಕೊರೊನಾ ಯುದ್ಧ ಗೆದ್ದ 226 ಗ್ರಾಮ ಪಂಚಾಯ್ತಿಗಳು.. ಕೋವಿಡ್ ಮಂಗಮಾಯದ ರಹಸ್ಯವೇನು ಗೊತ್ತಾ!?