ಬೆಳಗಾವಿ : ಕಮೀಷನ್ ಆರೋಪದಿಂದ ನುಣುಚಿಕೊಳ್ಳಲು ಸಚಿವ ಕೆ.ಎಸ್. ಈಶ್ವರಪ್ಪನವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಜೊತೆಗೆ ಬಿಜೆಪಿ ಮೆಂಬರ್‌ಶಿಪ್ ಕಾರ್ಡ್ ಸಹ ಬಿಡುಗಡೆ ಮಾಡಿದ್ದಾರೆ.
ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪ ಮಾಡಿರುವುದು.. ಮುಂದೆ ಆಗುವ ಅನಾಹುತಕ್ಕೆ ಈಶ್ವರಪ್ಪನವರೇ ಹೊಣೆ : ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಪೂರ್ಣ ಮಾಡಿದ್ದೇನೆ. ವರ್ಕ್ ಆರ್ಡರ್, ಪೇಮೆಂಟ್ ಇಸ್ಯೂ ಮಾಡುವುದಾಗಿ ಹೇಳಿದ್ದಾಗಲೇ ಕಾಮಗಾರಿ ಮಾಡಿದ್ದೇನೆ. ಸುಮ್ಮನೇ ನುಣುಚಿಕೊಳ್ಳುವ ಸಲುವಾಗಿ ಅವನು ಯಾರು ಗೊತ್ತಿಲ್ಲ ಅಂತಿದ್ದಾರೆ. ಅವರ ಜೊತೆಗೆ ಇರುವ ಫೋಟೋಗಳೆನಲ್ಲ ಮಾಧ್ಯಮದವರಿಗೂ ಕೊಟ್ಟಿದ್ದೇನೆ.
108 ಕಾಮಗಾರಿ ಮಾಡಬೇಕಾದ್ರೆ ಯಾರಾದರೂ ಸುಮ್ಮನೀರ್ತಾರಾ ಸರ್? ಮೇಲಿಂದ ದೇವರು ಬಂದು ಕಾಮಗಾರಿ ಮಾಡೀರ್ತಾರಾ ಸರ್? ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಪಕ್ಷಕ್ಕೂ ಒಳ್ಳೆಯ ಹೆಸರು ಬಂದಿದೆ. ಆರೋಪದಿಂದ ಪಾರಾಗಬೇಕು ಎಂದು ಏನೇನೋ ಹೇಳಬೇಡಿ. ತಮ್ಮ ಹಿರಿತನಕ್ಕೆ ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.
ಸಿಎಂ, ಪ್ರಧಾನಿ ಮೋದಿ ಸೇರಿ ಎಲ್ಲ ಹಿರಿಯರಿಗೂ ಮನವಿ ಮಾಡುತ್ತೇನೆ. ಕೂಡಲೇ ವರ್ಕ್ ಆರ್ಡರ್ ಮತ್ತು ಪೇಮೆಂಟ್ ಇಸ್ಯೂ ಮಾಡಬೇಕು ಎಂದು ಕೇಳುತ್ತೇನೆ. ಇಲ್ಲವಾದರೆ ಮುಂದೆ ಆಗುವ ಅನಾಹುತಕ್ಕೆ ಈಶ್ವರಪ್ಪನವರೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.