ಬೆಳಗಾವಿ: "ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ನೀಡಲು ಹುಕ್ಕೇರಿ ಪಿಡಿಒ ಸತಾಯಿಸುತ್ತಿದ್ದಾರೆ. ಹಾಗಾಗಿ ಅವರನ್ನು ಅಮಾನತು ಮಾಡಬೇಕು ಮತ್ತು ತಕ್ಷಣವೇ ಬಿಲ್ ಬಿಡುಗಡೆಗೊಳಿಸಬೇಕು" ಎಂದು ಒತ್ತಾಯಿಸಿ ಜಿ.ಪಂ.ಕಚೇರಿ ಎದುರು ಗುತ್ತಿಗೆದಾರರೊಬ್ಬರು ತನ್ನ ಕುಟುಂಬಸ್ಥರೊಂದಿಗೆ ವಿಷದ ಬಾಟಲಿ ಹಿಡಿದು ಧರಣಿ ನಡೆಸಿದರು.
ಗುತ್ತಿಗೆದಾರ ಅಶೋಕ ಚೌಗುಲೆ ಮಾತನಾಡಿ, "ಕಳೆದ ಐದಾರು ವರ್ಷದಿಂದ ಹುಕ್ಕೇರಿ ತಾಲೂಕಿನ ವಿವಿಧೆಡೆ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಕೆಲಸ ಮಾಡಿದ್ದೇನೆ. 2018ರಲ್ಲಿ ಮಾಡಿದ 19 ಲಕ್ಷ ರೂ. ಕಾಮಗಾರಿ ಬಿಲ್ ಮಂಜೂರು ಮಾಡಲು ಪಿಡಿಒ ಅವರಿಗೆ ಲಕ್ಷಾಂತರ ರೂ. ಲಂಚ ನೀಡಿದ್ದೇನೆ. ಆದರೂ ಬಿಲ್ ಮಂಜೂರು ಮಾಡುತ್ತಿಲ್ಲ. ಪಿಡಿಒಗೆ ನೀಡಿದ ಲಂಚದ ಆಡಿಯೋ, ವಿಡಿಯೋ ನನ್ನ ಬಳಿ ಇದೆ" ಎಂದರು.
"ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗಮನಕ್ಕೂ ತರಲಾಗಿತ್ತು. ಆಗ ಹುಕ್ಕೇರಿ ತಾ.ಪಂ.ಸಭೆಯಲ್ಲಿ ಬಿಲ್ ಬಿಡುಗಡೆಗೆ ಅವರು ಪಿಡಿಒಗೆ ಸೂಚಿಸಿದ್ದರು. ಆದರೆ ಮತ್ತೆ ಕಮಿಷನ್ ಕೊಡುವಂತೆ ಪಿಡಿಒ ಸತಾಯಿಸುತ್ತಿದ್ದಾರೆ. ಮನೆ, ಆಸ್ತಿ ಮಾರಾಟ ಮಾಡಿದ್ದೇನೆ. ಸಾಲಗಾರರು ಮನೆಗೆ ಬರುತ್ತಿದ್ದಾರೆ. ಅವರಿಗೆ ಹೆದರಿ ತಲೆಮರೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಆತ್ಮಹತ್ಯೆಯೊಂದೇ ನಮಗಿರುವ ದಾರಿ" ಎಂದು ಹೇಳಿದರು.
ಜಿ.ಪಂ.ಸಿಇಒ ಹರ್ಷಲ್ ಭೊಯರ್ ಮಾತನಾಡಿ, "ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ನೀಡುತ್ತಿಲ್ಲ ಎಂದು ಗುತ್ತಿಗೆದಾರ ಹೇಳಿದ್ದಾರೆ. ನರೇಗಾ ಯೋಜನೆಯಡಿ ಮಾಡಿದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ. ಆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಗುತ್ತಿಗೆದಾರ, ಗ್ರಾ.ಪಂ.ಪಿಡಿಒ ಮತ್ತು ಎಡಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಶೀಲನೆ ಮಾಡುತ್ತೇನೆ. ನಿಯಮಾನುಸಾರ ಕೆಲಸ ಆಗಿದ್ದರೆ, ಉದ್ದೇಶಪೂರ್ವಕವಾಗಿ ಬಿಲ್ ವಿಳಂಬವಾಗಲು ಅಧಿಕಾರಿಗಳ ತಪ್ಪು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಲಂಚ ನೀಡಿದ್ದಾಗಿ ಹೇಳಿದ್ದರ ಬಗ್ಗೆಯೂ ಪರಿಶೀಲಿಸುತ್ತೇನೆ" ಎಂದು ತಿಳಿಸಿದರು.
ಇದಕ್ಕೂ ಮೊದಲು, ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ ಅಶೋಕ ಗೊಳಪ್ಪ ಚೌಗುಲೆ, ತಮ್ಮ ಪತ್ನಿ ಮತ್ತು ತಾಯಿಸಮೇತ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ಕುಳಿತರು. ತನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲಿ ಹಿಡಿದು ಎಚ್ಚರಿಕೆ ನೀಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ವಿಷದ ಬಾಟಲಿಯನ್ನು ಕಸಿದುಕೊಂಡರು. ಬಳಿಕ ಸ್ಥಳಕ್ಕೆ ಜಿ.ಪಂ.ಸಿಇಒ ಹರ್ಷಲ್ ಭೊಯರ್ ಆಗಮಿಸಿದರು.
ಇದನ್ನೂ ಓದಿ:ಅಂತರ್‌ಜಾತಿ ವಿವಾಹ ವಿವಾದ: ಸ್ವಜಾತಿಯರಿಂದ ಬಹಿಷ್ಕಾರ, ಪೊಲೀಸರಿಗೆ ದೂರು