ಬೆಳಗಾವಿ :ಬಿ ಎಸ್ ಯಡಿಯೂರಪ್ಪನವರು ಲೆಜೆಂಡ್ ನಾಯಕ. ಅವರು ದುಃಖದಿಂದ ರಾಜೀನಾಮೆ ನೀಡಬಾರದಿತ್ತು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.
ಬಿಎಸ್‌ವೈ ರಾಜೀನಾಮೆ ಕುರಿತಂತೆ ಶಾಸಕಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ 50 ವರ್ಷ ರಾಜಕೀಯದಲ್ಲಿ ಅನುಭವ ಇದ್ದಂತವರು. ಬಿಜೆಪಿ ಕಟ್ಟಿ ಬೆಳೆಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಿದವರು. ಬಹಳಷ್ಟು ದುಃಖದಿಂದ ಬಿ ಎಸ್ ಯಡಿಯೂರಪ್ಪ ಭಾಷಣ ಮಾಡುತ್ತಿದ್ದದ್ದು ಕೇಳಿ, ನಿಜವಾಗಿಯೂ ಆ ಕ್ಷಣ ಒಂದು ಯುಗ ಅಂತ್ಯ ಆಗ್ತಿದೆಯಾ ಎಂದು ಅನಿಸಿತು ಎಂದ್ರು.
ಯಡಿಯೂರಪ್ಪನವರು ಹಿರಿಯರು, ಹೋರಾಟದ ಶಕ್ತಿ, ಕಿಚ್ಚು ಧೈರ್ಯದ ಬಗ್ಗೆ ಅಭಿಮಾನ ಇದೆ. ಅವರ ಬಗ್ಗೆ ಕಾಳಜಿ ಇದೆ. ಬಿ.ಎಸ್.ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ, ಹೋರಾಟಗಾರರು. ಈ ರೀತಿ ದುಃಖದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ. ರಾಜ್ಯದಲ್ಲಿ ಕೋವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ.
ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಈ ಬೆಳವಣಿಗೆ ಅವಶ್ಯಕತೆ ಇರಲಿಲ್ಲ. ರಾಜ್ಯ ಸಂಕಷ್ಟದಲ್ಲಿದ್ದಾಗ ಇಂತಹ ಸಂದರ್ಭದಲ್ಲಿ ಸಿಎಂ ಚೇಂಜ್ ಮಾಡುವ ಅನಿವಾರ್ಯತೆ ಇತ್ತಾ? ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ರೀತಿಯ ಬದಲಾವಣೆ ಆಡಳಿತದ ಮೇಲೆ ಪರಿಣಾಮ ಬೀರುತ್ತೆ. ಆಡಳಿತಕ್ಕಿಂತ ಬಿಜೆಪಿಗೆ ರಾಜಕೀಯ ಮುಖ್ಯ ಆಯ್ತಾ ಅಂತಾ ಅನಿಸುತ್ತದೆ ಎಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಖೇದ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದನ್ನು ಯಾರೂ ಸಹಿಸಲ್ಲ : ಸತೀಶ್ ಜಾರಕಿಹೊಳಿ
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ರೀತಿ ಸರಿಯಿಲ್ಲ. ಇದು ಕೆಟ್ಟ ಬೆಳವಣಿಗೆ ಅನಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಪಕ್ಷದಿಂದ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಲಾಗಿದೆ ಎಂದರು.
ಅತ್ಯಂತ ಪ್ರಭಾವಿ ಜನನಾಯಕರಗಿದ್ದ ಯಡಿಯೂರಪ್ಪ ಗೌರವಯುತವಾಗಿ ಹೋಗಲು ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ, ಅವರನ್ನು ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು 12ನೇ ಶತಮಾನವನ್ನು ನೆನಪಿಸುತ್ತಿದೆ. ಮನುವಾದಿಗಳು ಬಸವಣ್ಣನನ್ನು ಅಧಿಕಾರಿದಿಂದ ಕೆಳಗೆ ಇಳಿಸಿದ್ದರು.
ಸಾವಿರ ವರ್ಷಗಳ ಹಿಂದೆ ಯಡಿಯೂರಪ್ಪಗೆ ಇದು ಮರುಕಳಿಸಿದೆ. ಅಂದು ಮನುವಾದಿಗಳು ಯಶಸ್ವಿಯಾಗಿದ್ದರು. ಇಂದೂ ಯಶಸ್ವಿಯಾಗಿದ್ದಾರೆ. ಮನುವಾದಿಗಳ ವಿರುದ್ಧ ಯಡಿಯೂರಪ್ಪ ಹೋರಾಟ ಮಾಡಬೇಕು ಎಂದ್ರು.
ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ಯಡಿಯೂರಪ್ಪ ಅವರ ಬಗ್ಗೆ 3ನೇ ವ್ಯಕ್ತಿ ಮಾತನಾಡುವ ನೈತಿಕತೆ ಇಲ್ಲ : ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು:ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿರುವ ಬಗ್ಗೆ ಮೂರನೇ ವ್ಯಕ್ತಿಗಳು ಮಾತನಾಡುವ ನೈತಿಕತೆ ಇಲ್ಲ, ಯಡಿಯೂರಪ್ಪ ಅವರು ಹೈಕಮಾಂಡ್ ಸ್ಪಷ್ಟ ನಿರ್ದೇಶನದಂತೆ ನಡೆದುಕೊಂಡಿದ್ದಾರೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದರೆ, ವಿಶೇಷ ಪ್ರಕರಣ ಕಾರಣ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಾಗಿತ್ತು. ವಯಸ್ಸಿನ ಕಾರಣದಿಂದಲೇ ಅಡ್ವಾಣಿ, ಜೋಶಿ ಅಂತಹ ನಾಯಕರಿಗೆ ಅಧಿಕಾರ ನೀಡಿರಲಿಲ್ಲ ಎಂದರು.
ಯಡಿಯೂರಪ್ಪ ಭಾವುಕರಾಗುವುದು ಸಹಜ: ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ಭಾವುಕರಾಗುವುದು ಸಹಜ. ಅವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ಬಿಜೆಪಿ ಉತ್ತಮವಾಗಿ ನಡೆಸಿಕೊಂಡಿದೆ ಎಂದು ಯಡಿಯೂರಪ್ಪ ಅವರೇ ಹೇಳಿದಾಗ ಮೂರನೇ ವ್ಯಕ್ತಿಗಳಾಗಲಿ ಅಥವಾ ಕಾಂಗ್ರೆಸ್ನವರು ಈ ಬಗ್ಗೆ ಮಾತನಾಡಬಾರದು. ಇದು ಬಿಜೆಪಿಯ ಆಂತರಿಕ ವಿಚಾರ ಎಂದು ಹೇಳಿದರು.
ದಲಿತ ಸಿಎಂ ಪ್ರಸ್ತುತ :ಮುಖ್ಯಮಂತ್ರಿ ನೇಮಕ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿಲುವು ತಾಳಲಿದೆ. ಆದರೆ, ದಲಿತ ಸಿಎಂ ಅಪ್ರಸ್ತುತ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.