ಬೆಳಗಾವಿ : ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದು, ಕರ್ನಾಟಕದಲ್ಲಿಯೂ ಅದನ್ನೇ ಮುಂದುವರಿಸಿವೆ. ಇದರ ವಿರುದ್ಧ ಜನರು ಜಾಗೃತರಾಗಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದಾರೆ. ಇಂದು (ಬುಧವಾರ) ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕೆಲವೆಡೆ ಪ್ರಚಾರ ನಡೆಸಿದ್ದೇನೆ. ಆಮ್ ಆದ್ಮಿ ಪರವಾಗಿ ಉತ್ತಮ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಮೇ.10ಕ್ಕೆ ಕರ್ನಾಟಕದಲ್ಲಿ ವಿಧಾನಭಾ ಚುನಾವಣೆ ನಡೆಯಲಿದೆ. ಅದೇ ದಿನ ಪಂಜಾಬ್‌ನಲ್ಲಿ ಉಪಚುನಾವಣೆ ನಡೆಯಲಿದೆ. ಆಮ್ ಆದ್ಮಿ ರಾಷ್ಟ್ರೀಯ ಪಕ್ಷ ಘೋಷಣೆಯಾದ ಮೇಲೆ ಮೊದಲನೇ ಚುನಾವಣೆ ನಡೆಯುತ್ತಿದೆ. ಆಮ್ ಆದ್ಮಿ ಮರ್ಯಾದೆಯ ಪಕ್ಷ. ನಮ್ಮ ನಾಯಕ ಅರವಿಂದ ಕ್ರೇಜಿವಾಲ್ ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇದರ ಪರಿಣಾಮ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದಿಂದ ಸರಕಾರ ರಚನೆ ಮಾಡಲು ಸಾಧ್ಯವಾಯಿತು ಎಂದರು.
ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ: ನಮ್ಮ ಪಕ್ಷ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಸಿಸೋಡಿಯಾ ಮನೆಯ ಮೇಲೆ ದಾಳಿ ಮಾಡಿದರು. ಶಾಲೆ ನಿರ್ಮಾಣ ಮಾಡುತ್ತಿರುವ ಕಾರಣಕ್ಕೆ ದುರುದ್ದೇಶದಿಂದ ನೂರಾರು ಅಧಿಕಾರಿಗಳಿಂದ ದಾಳಿ ಮಾಡಿಸಿದರು. ಅವರಿಗೆ ದಿನಕ್ಕೆ ನೀಡುವ ಸಂಬಳದಷ್ಟು ಕೂಡ ಅಲ್ಲಿ ಹಣ ಸಿಗಲಿಲ್ಲ. ಅದೇ ರೀತಿ ಈಗ ಕರ್ನಾಟಕದಲ್ಲಿಯೂ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲೆಕ್ಟೆಡ್ ಜನ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸೆಲೆಕ್ಟೆಡ್ ಜನ ಅಲ್ಲ ಎಂದು ಮಾನ್ ಕಿಡಿಕಾರಿದರು.