ಬೆಳಗಾವಿ:ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ಸ್ವಾಮೀಜಿಯವರ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಸ್ವಾಮೀಜಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಬಾಚಲಿ ಗ್ರಾಮದ ನಿವಾಸಿ ಪಾಂಡುರಂಗ ಜಾಧವ್ (76), ಹುಕ್ಕೇರಿ ತಾಲೂಕಿನ ಪರಕನಟ್ಟಿ ಗ್ರಾಮದ ನಿವಾಸಿ ಕಾರು ಚಾಲಕ ಪಂಚಾಕ್ಷರಿ ಹಿರೇಮಠ ಮೃತ ದುರ್ದೈವಿಗಳು. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡವರು.
ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಇಂದು ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಸ್ವಾಮೀಜಿ ಕಾರಿನಲ್ಲಿ ಆಗಮಿಸುತ್ತಿದ್ದರು. ಮಾರ್ಗ ಮಧ್ಯ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಕಂಟೇನರ್ ಮಧ್ಯ ಅಪಘಾತ ಸಂಭವಿಸಿದೆ.