ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಬೆಳಗಾವಿ: "ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ತಲೆ ತಗ್ಗಿಸುವ ವಿಚಾರ. ಎಲ್ಲರೂ ಜಂಟಿಯಾಗಿ ಕೆಲಸ ಮಾಡುವ ಮೂಲಕ ದೊಡ್ಡ ಮಟ್ಟದ ಹೋರಾಟ ಮಾಡಿದರೆ ಭ್ರೂಣ ಹತ್ಯೆ ತಡೆಯಲು ಸಾಧ್ಯವಾಗುತ್ತದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ನಮಗೆ ಬಂದಿರುವ ಎಲ್ಲ ಮಾಹಿತಿಯನ್ನು ನಾವು ಸಿಒಡಿಗೆ ಕೊಡುತ್ತಿದ್ದೇವೆ. ಅವರು ತನಿಖೆ ಮಾಡುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಕೊಟ್ಟಿರುವ ಮಾಹಿತಿಯನ್ನೂ ಕಳುಹಿಸಿಕೊಟ್ಟಿದ್ದೇವೆ. ಸಾರ್ವಜನಿಕರೂ ಸಹ ನಮಗೆ ಹೆಚ್ಚಿನ ಸಹಕಾರ ಕೊಡಬೇಕು" ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, "ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲು ಸಭಾಧ್ಯಕ್ಷರು ದಿನಾಂಕ ನಿಗದಿಪಡಿಸಿದ್ದಾರೆ. ಆ ಚರ್ಚೆಯಲ್ಲಿ ಹೆಚ್ಚು ಶಾಸಕರು ಭಾಗಿಯಾಗಿ ಈ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿದ್ದು ಖಂಡಿತವಾಗಿಯೂ ಅರ್ಥಪೂರ್ಣವಾಗುತ್ತದೆ" ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
"ಬರ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಪ್ರತಿಪಕ್ಷಗಳು ನಮಗೆ ಸಹಕಾರ ಕೊಡಬೇಕು. ಬರ ನಿರ್ವಹಿಸಲು ಸರ್ಕಾರ ಸಜ್ಜಾಗಿದೆ. ಕೇಂದ್ರದ ಸಹಕಾರ ಕೂಡ ನಮಗೆ ಬೇಕಾಗುತ್ತದೆ. ನಮ್ಮಲ್ಲಿ ಏನಾದರೂ ಲೋಪದೋಷಗಳಿದ್ದರೆ ಅವುಗಳನ್ನು ಎತ್ತಿ ಹಿಡಿಯುವುದು ಅವರ ಕರ್ತವ್ಯ. ನಮ್ಮ ಸರ್ಕಾರ ಜನರಿಗೆ ನೆರವು ನೀಡಲಿದೆ" ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ:ಸಿಎಂ ಮುಸ್ಲಿಮರ ಓಲೈಕೆ ಮಾಡುತ್ತಿರುವುದು ಶೋಭೆ ತರಲ್ಲ: ಬಿ.ಎಸ್.ಯಡಿಯೂರಪ್ಪ