ಚಿಕ್ಕೋಡಿ:ಮುಖ್ಯಮಂತ್ರಿಯಾದಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಮೋದನೆ, ಮಂಜೂರಾತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಬಿಎಸ್ವೈ ಮಧ್ಯಾಹ್ನ 2-15ಕ್ಕೆ ಅಥಣಿಯ ಎಸ್ಎಂಎಸ್ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ ಮುಖಾಂತರ ಆಗಮಿಸಿ ನಂತರ ಕೃಷ್ಣೆಯ ಪ್ರವಾಹದ ಅಬ್ಬರಕ್ಕೆ ಬಸವಳಿದು ಹೋಗಿರುವ ಅಥಣಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ತಾಂತ್ರಿಕ ಕಾರಣಗಳಿಂದ ಮುಖ್ಯಮಂತ್ರಿಗಳ ಪ್ರವಾಸ ರದ್ದಾಗಿತ್ತು. ಆದರೆ ಬೆಳಗಾವಿಯ ಬಿಜೆಪಿ ನಾಯಕರು ಮನವಿ ಮಾಡಿದ್ದರಿಂದ ಯಡಿಯೂರಪ್ಪ ಬರುತ್ತಿದ್ದಾರೆ. ಇನ್ನು ಸಿಎಂ ಭೇಟಿ ಮಾಡುವ ಜಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯೂ ಸಹ ಮುಂದುವರೆಯಲಿದ್ದು, ಎನ್ಡಿಆರ್ಎಫ್ ತಂಡ ಮತ್ತು ಎಸ್ಡಿಆರ್ಎಫ್ ತಂಡಗಳು ಜನ-ಜಾನುವಾರುಗಳ ರಕ್ಷಣೆಯಲ್ಲಿ ತೊಡಗಲಿವೆ.
ಇನ್ನು ಈಗಾಗಲೇ ಕೃಷ್ಣಾ ಒಳಹರಿವಿನ ಪ್ರಮಾಣ 2 ಲಕ್ಷ 80 ಸಾವಿರ ಕ್ಯೂಸೆಕ್ ದಾಟಿದ್ದು, ನಿನ್ನೆ ತಡರಾತ್ರಿ 1 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡಲಾಗಿದೆ. ಹೀಗಾಗಿ ನದಿ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು, ಒಂದು ಕಡೆ ಸಿಎಂ ಯಡಿಯೂರಪ್ಪ ಭೇಟಿ, ಇನ್ನೊಂದೆಡೆ ಜನರ ರಕ್ಷಣಾ ಕಾರ್ಯ ಎರಡು ಸಹ ಒಟ್ಟಿಗೆ ಸಾಗಲಿವೆ.