ಬೆಳಗಾವಿ :ಭಾರತದ ರಸ್ತೆ ಜಾಲವನ್ನು 2024ರ ವೇಳೆಗೆ ಅಮೆರಿಕಕ್ಕೆ ಸರಿಸಮನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಐದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಅಭಿವೃದ್ಧಿಯೂ ರಸ್ತೆ ಸಂಪರ್ಕವನ್ನು ಅವಲಂಭಿಸಿದೆ. ಆದ್ದರಿಂದ ರಸ್ತೆ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಸರ್ಕಾರ ಬದ್ಧವಿದೆ ಎಂದು ಹೇಳಿದರು.
ಭಾರತ ಮಾಲಾ-2 ರಲ್ಲಿ ಸೇರ್ಪಡೆ :ಭಾರತ ಮಾಲಾ-2 ಯೋಜನೆಯಲ್ಲಿ ಈ ಭಾಗದ ಇನ್ನಷ್ಟು ಯೋಜನೆಗಳನ್ನು ಸೇರ್ಪಡೆ ಮಾಡಲಾಗುವುದು. ಹೊಸ ಮೇಲ್ಸೆತುವೆ ಪ್ರಸ್ತಾವವನ್ನು ಅಭಯ್ ಪಾಟೀಲ ನೀಡಿದ್ದರು. ಆದರೆ, ಸ್ಥಳೀಯ ಕಾರಣಗಳಿಂದ ಅದು ಸಾಧ್ಯವಾಗಿರುವುದಿಲ್ಲ. ಸ್ಥಳೀಯವಾಗಿ ಅಗತ್ಯ ಸಹಕಾರ ನೀಡಿದರೆ ಮುಂದುವರಿಸಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಈ ಭಾಗದ ಸಂಸದರು, ಶಾಸಕರು ವಿವಿಧ ರಸ್ತೆಗಳ ಅಭಿವೃದ್ಧಿ ಮಾಡಲು ಹಾಗೂ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ಎಲ್ಲ ಪ್ರಸ್ತಾವನೆಗಳಿಗೆ ತಕ್ಷಣವೇ ಮಂಜೂರಾತಿ ನೀಡಲಾಗುವುದು. 9 ಸಾವಿರ ಕಿ.ಮೀ. ಉದ್ದದ ಗ್ರೀನ್ಫೀಲ್ಡ್ ಹಾಗೂ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 3 ಲಕ್ಷ ಕೋಟಿಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ.
ಇದರಲ್ಲಿ ಬೆಂಗಳೂರು-ಚೆನೈ ಯೋಜನೆ ಕೂಡ ಒಳಗೊಂಡಿದೆ. ದೆಹಲಿ-ಮುಂಬೈ ಹೆದ್ದಾರಿಯಲ್ಲಿ 120 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಬಹುದು. ಇದರಿಂದ ಎರಡು ನಗರಗಳ ನಡುವಿನ ಪ್ರಯಾಣ ಅವಧಿ 12 ಗಂಟೆಯಾಗಲಿದೆ ಎಂದರು.
ಬೆಂಗಳೂರು ಟ್ರಾಫಿಕ್ ಹಾಗೂ ನಗರೀಕರಣ ಒತ್ತಡವನ್ನು ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕದಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಮಾರ್ಟ್ ವಿಲೇಜ್ ಹಾಗೂ ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸಿ ನಿರ್ಧಾರ: ಸಿಎಂ
ರಾಜ್ಯ ಸರಕಾರವು ಅಗತ್ಯ ರಸ್ತೆ ಯೋಜನೆಗಳಿಗೆ ಭೂಸ್ವಾಧೀನವನ್ನು ಮಾಡಿಕೊಟ್ಟರೆ ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪುಣೆ-ಬೆಂಗಳೂರು ಹೆದ್ದಾರಿ ಅಂತರ ಕಡಿಮೆಗೊಳಿಸುವ ಯೋಜನೆ :ಭಾರತ ಮಾಲಾ-2 ಯೋಜನೆಯಲ್ಲಿರುವ ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರವನ್ನು 100 ಕಿ.ಮೀ. ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದು ಬೆಂಗಳೂರು-ಚೆನ್ನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ ಎಂದು ವಿವರಿಸಿದರು.
ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ನಡುವಿನ ಸಂಬಂಧ ಮರಾಠಾ-ಕನ್ನಡಿಗರ ಸಹೋದರತ್ವಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು. ಈ ಐದು ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆಯು ಈ ಭಾಗದ ರಸ್ತೆ ಸಂಪರ್ಕಕ್ಕೆ ಅನುಕೂಲವಾಗಲಿದೆ. ಈ ರಸ್ತೆಗಳು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ರಸ್ತೆ ಸಂಪರ್ಕವನ್ನು ಉತ್ತಮ ಪಡಿಸಲಿವೆ. ಇದರಿಂದ ಕಬ್ಬು ಸಾಗಾಣಿಕೆ ಸೇರಿದಂತೆ ಇತರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.
1.40 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ :ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, 2014ರವರೆಗೆ ದೇಶದಲ್ಲಿ ಒಟ್ಟಾರೆ 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರದ ಕೇವಲ ಏಳು ವರ್ಷಗಳಲ್ಲಿ 1.40 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಅತ್ಯಂತ ಕಡಿಮೆ ಕಾಲಘಟ್ಟದಲ್ಲಿ ಮಹತ್ವಪೂರ್ಣ ಬದಲಾವಣೆ ಹಾಗೂ ರಸ್ತೆಗಳ ಅಭಿವೃದ್ಧಿ ಆಗಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ನಿತಿನ್ ಗಡ್ಕರಿ ಅವರ ಅವಧಿಯಲ್ಲಿ ಆಗಿದೆ. ಸಚಿವ ಗಡ್ಕರಿಯವರು ಇಡೀ ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಯೋಜನೆಗಳನ್ನು ನೀಡಿದ್ದಾರೆ. ರಸ್ತೆಗಳಿಂದಲೇ ದೇಶದ ಉನ್ನತಿ ಸಾಧ್ಯ ಎಂಬುದನ್ನು ಅರಿತುಕೊಂಡಿರುವ ಅವರು, ಉತ್ತಮ ರಸ್ತೆಗಳ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಎಲ್ಲಾ ರಸ್ತೆ ಅಂಡರ್ಪಾಸ್ಗಳನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ವತಿಯಿಂದ ಮಾಡಿಕೊಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ನಿರ್ಮಾಣ ಸುಲಭವಾಗಲಿದೆ ಎಂದರು. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 42 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಸದರ ಪ್ರಸ್ತಾವಗಳಿಗೆ ಸಚಿವ ಗಡ್ಕರಿ ಅವರು ಮಂಜೂರಾತಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ರಾಜ್ಯಕ್ಕೆ ಇನ್ನಷ್ಟು ನೆರವು ಒದಗಿಸಲು ಮನವಿ :ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಹಿಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದಾದ್ಯಂತ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಲೋಕೋಪಯೋಗಿ ಇಲಾಖೆಯ ಸಚಿವರು ಅವರ ಕನಸನ್ನು ನನಸು ಮಾಡಿದ್ದಾರೆ ಎಂದು ಹೇಳಿದರು.
ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಪ್ರತಿದಿನ 70 ಕಿ.ಮೀ. ಹೆದ್ದಾರಿ ನಿರ್ಮಾಣದ ಗುರಿಯನ್ನು ಸರ್ಕಾರ ಹೊಂದಿದೆ. ಕರ್ನಾಟಕದ ರಾಜ್ಯದ ಹೆದ್ದಾರಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಇನ್ನೂ ಹೆಚ್ಚಿನ ನೆರವು ನೀಡಬೇಕು ಎಂದು ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಚಿವ ಗೋವಿಂದ ಕಾರಜೋಳ, ಮಾತನಾಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಕರ್ನಾಟಕ ರಾಜ್ಯದ ರಸ್ತೆ ಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವ ಮೂಲಕ ಪ್ರಗತಿಗೆ ಸಹಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ, ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಯನ್ನು ಷಟ್ಪಥವನ್ನಾಗಿ ನಿರ್ಮಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಐದು ಯೋಜನೆಗಳಿಗೆ ಶಂಕುಸ್ಥಾಪನೆ :ಬೆಳಗಾವಿ-ಸಂಕೇಶ್ವರ ಬೈಪಾಸ್, ಸಂಕೇಶ್ವರ ಬೈಪಾಸ್-ಮಹಾರಾಷ್ಟ್ರ ಗಡಿಯವರೆಗೆ ಷಟ್ಪಥ ನಿರ್ಮಾಣ ಕಾಮಗಾರಿ, ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ಕಾಮಗಾರಿಗಳು, ಇದೇ ರೀತಿ ವಿಜಯಪುರ-ಮುರಗುಂಡಿ(ಎನ್.ಎಚ್.548ಬಿ) ಹಾಗೂ ಸಿದ್ದಾಪುರ-ವಿಜಯಪುರ(ಎನ್.ಎಚ್.561ಎ) ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.