ಬೆಳಗಾವಿ:ಕೇಂದ್ರ ಸರ್ಕಾರ ಮಹದಾಯಿ ಯೋಜನೆ ವಿಸ್ತೃತ ಯೋಜನಾ ವರದಿ -ಡಿಪಿಆರ್ ಅಂಗೀಕಾರಕ್ಕೆ ಅನುಮತಿ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಘಟಿತವಾಗಿ ಹೋರಾಟ ಮಾಡಿದ್ದಕ್ಕೆ ಜಯ:ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಘಟಿತವಾಗಿ ಹೋರಾಟ ಮಾಡಿದ್ದಕ್ಕೆ ಜಯ ಸಿಕ್ಕಿದೆ. ನಮಗೆ ಇದರಿಂದ ಬಹಳ ಸಂತೋಷವಾಗಿದೆ. ಇಡೀ ಉತ್ತರ ಕರ್ನಾಟಕಕ್ಕೆ ಜಯ ಸಿಕ್ಕಂತೆ ಆಗಿದೆ. ಸಾಕಷ್ಟು ಜನ ಲಾಠಿ ಏಟು ತಿಂದರು. ಎಲ್ಲ ರೈತರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಳಾಸ ಬಂಡೂರಿ ಯೋಜನೆ ಅಂತಿಮವಾಗಿ ಡಿಪಿಆರ್ಗೆ ಬಂದಿದೆ. ಮಹದಾಯಿ ಯೋಜನೆ ಬಗ್ಗೆ ನಮ್ಮ ತಂದೆಯ ಜೊತೆ ಇದ್ದ ಬಾದಾಮಿಯ ಶಾಸಕರು ಮಹದಾಯಿಯಿಂದ ಬಾದಾಮಿಯವರಿಗೂ ಅಂದು ನಡೆದಿದ್ದನ್ನ ನೆನೆಸಿಕೊಂಡು ಬಾವುಕರಾದರು. ಈ ವಿಷಯವನ್ನು ಸಿಎಂ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಇದನ್ನೂ ಓದಿ:ಕಳಸಾ ಬಂಡೂರಿ ಯೋಜನೆಗೆ ಸಿಕ್ತು ಅನುಮತಿ: ಹೀಗಿದೆ ಹೋರಾಟದ ಹಾದಿ..
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ: ನಾವು ಸಾಕಷ್ಟು ಹೋರಾಟ ಮಾಡಿದ್ದೀವಿ. ನಾನು ಸಹ ಪಾದಯಾತ್ರೆ ಮಾಡಿದ್ದೆ. 2009 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹದಾಯಿ ನೀರು ಡೈವರ್ಟ್ ಮಾಡಲು ಬಿಡೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ದರು. ಯಡಿಯೂರಪ್ಪ ಅವರ ಅವಧಿಯಲ್ಲಿ ಕೆಲಸ ಪ್ರಾರಂಭವಾಗಿತ್ತು. ಆದರೆ ಪೂರ್ಣ ವಾಗಿರಲಿಲ್ಲ. ಮುಂದೆ ಬಂದ ಸರ್ಕಾರಗಳು ಕೆಲಸ ಪೂರ್ಣ ಮಾಡಲಿಲ್ಲ. ಆಮೇಲೆ ಗೋವಾ ಕ್ಯಾತೆ ತೆಗೆಯಿತು. ಅದು ಟ್ರಿಬ್ಯುನಲ್ಗೆ ಹೊಯ್ತು. ಕೇಂದ್ರದ ಬಿಜೆಪಿ ಸರ್ಕಾರ ಬದ್ಧತೆ ತೊರಿಸಿದೆ. ನಮ್ಮ ಯೋಜನೆಗೆ ಅಲ್ಲಿ ಕಾಂಗ್ರೆಸ್ ಗೋಡೆ ಕಟ್ಟಿದರು. ಅದೇ ಕಾಂಗ್ರೆಸ್ ಸಾಧನೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ: ಈಗ ಡಿಪಿಆರ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ನಮ್ಮ ದಾರಿ ಸುಗಮವಾಗಿದೆ. ಆ ಕಾಪಿ ಬರ್ತಿದ್ದ ಹಾಗೆ ಟೆಂಡರ್ ಕರೆಯುತ್ತೇವೆ. ಪಂಪ್ ಹೌಸ್ ನಿರ್ಮಾಣ ಮಾಡ್ತೀವಿ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.