ಅಥಣಿ:ನನ್ನ ರಾಜಕೀಯ ಜೀವನದಲ್ಲಿ ಈಗ ಸಿಗುತ್ತಿರುವಷ್ಟು ಸ್ಪಂದನೆಯನ್ನು ನಾನು ಯಾವತ್ತೂ ನೋಡಿರಲಿಲ್ಲ. ಒಂದು ಸಲ ನಮ್ಮ ಮಾಲೀಕರಾದ ಮತದಾರರು ತೀರ್ಮಾನ ಮಾಡಿದರೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಮೂರೂವರೆ ವರ್ಷ ಯಡಿಯೂರಪ್ಪ ಸರ್ಕಾರ ಇರಬೇಕು ಅಂತಾ ಜನ ಬಯಸಿದ್ದಾರೆ. ಹೀಗಾಗಿ ನೂರಕ್ಕೆ ನೂರರಷ್ಟು ಹದಿನೈದು ಕ್ಷೇತ್ರಗಳಲ್ಲಿ ನಾವೇ ಗೆಲ್ತೀವಿ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.
ನಾಳೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಅಥಣಿ ಪಟ್ಟಣದಲ್ಲಿ ಎರಡನೇ ಸುತ್ತಿನ ಬೃಹತ್ ಸಾರ್ವಜನಿಕ ಪ್ರಚಾರಕ್ಕೆ ಆಗಮಿಸಿರುವ ಬಿಎಸ್‌ವೈ, ಡಿಸಿಎಂ ಲಕ್ಷ್ಮಣ ಸವದಿ ನಿವಾಸಕ್ಕೆ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು.
ಉಪಚುನಾವಣೆಯಲ್ಲಿ ಶೇ 70-75ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕಿದೆ ಎಂದು ಎಲ್ಲಾ ಕಡೆ ಹೇಳಿದ್ದೇನೆ. ಈ ಬಾರಿ ವಿಶೇಷವೆಂಬಂತೆ ಪರಿಶಿಷ್ಟ ಜಾತಿ, ಪಂಗಡದವರಂತೆಯೇ ಅಲ್ಪಸಂಖ್ಯಾತರಾದ ಮುಸ್ಲೀಮರು ಮತ್ತು ಕ್ರಿಶ್ಚಿಯನ್ನರು ಕೂಡ ನಮ್ಮ ಜೊತೆ ಕೈ ಜೋಡಿಸಲಿದ್ದಾರೆ ಎಂದರು.