ಕರ್ನಾಟಕ

karnataka

By

Published : Jan 4, 2020, 10:12 AM IST

ETV Bharat / state

ಉದ್ಯಮಿ ಚನ್ನರಾಜ ಹಟ್ಟಿಹೋಳಿ ವಿರುದ್ಧ ನಕಲಿ ಪ್ರಮಾಣಪತ್ರ ಸೃಷ್ಟಿಸಿದ ಆರೋಪ

ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದಿರುವ ಉದ್ಯಮಿ ಚನ್ನರಾಜ ಹಟ್ಟಿಹೋಳಿ, ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತಕ್ಷಣವೇ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.

ಉದ್ಯಮಿ ಚನ್ನರಾಜ ಹಟ್ಟಿಹೋಳಿ
ಉದ್ಯಮಿ ಚನ್ನರಾಜ ಹಟ್ಟಿಹೋಳಿ

ಬೆಳಗಾವಿ: ಪಿಕೆಪಿಎಸ್ ನಿರ್ದೇಶಕ ಸ್ಥಾನಕ್ಕಾಗಿ ‌ನಕಲಿ ಪ್ರಮಾಣಪತ್ರ ಸೃಷ್ಟಿಸಿದ ಆರೋಪಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಉದ್ಯಮಿ ಚನ್ನರಾಜ ಹಟ್ಟಿಹೋಳಿ ಗುರಿಯಾಗಿದ್ದಾರೆ.

ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದಿರುವ ಚೆನ್ನರಾಜ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೋಳಿ ಗ್ರಾಮದವರಾಗಿರುವ ಚನ್ನರಾಜ ಹಟ್ಟಿಹೋಳಿ, ತಾವು ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ಪ್ರಮಾಣಪತ್ರ ಪಡೆದಿದ್ದಾರೆ. ತಕ್ಷಣವೇ ಚನ್ನರಾಜ ಹಟ್ಟಿಹೋಳಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ

ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಹವಾಸಿ ಪ್ರಮಾಣಪತ್ರ ನೀಡುವುದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ, ಚನ್ನರಾಜ ಹಟ್ಟಿಹೋಳಿ ಅವರು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಲ್ಲಿಸಿರುವ ರಹವಾಸಿ ಪ್ರಮಾಣಪತ್ರದ ಮೇಲೆ ಮೋದಗಾ ಗ್ರಾಮ ಪಂಚಾಯತಿಯ ಸದಸ್ಯ ಬಾಬು ಕಾಳೆ ಎಂಬುವವರ ಸಹಿ ಇದೆ. ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದಿರುವ ಚನ್ನರಾಜ ಹಟ್ಟಿಹೋಳಿ, ರಹವಾಸಿ ಪ್ರಮಾಣಪತ್ರದ ಮೇಲೆ ಸಹಿ ಮಾಡಿರುವ ಗ್ರಾಮ ಪಂಚಾಯತಿಯ ಸದಸ್ಯ ಬಾಬು ಕಾಳೆ, ರಹವಾಸಿ ಪ್ರಮಾಣಪತ್ರ ಪರಿಶೀಲಿಸದೆ ಸಂಘದ ಸದಸ್ಯತ್ವ ನೀಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಗರ ಪೋಲಿಸ್ ಆಯುಕ್ತರು, ಪ್ರಾದೇಶಿಕ ಆಯುಕ್ತ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಸಿಇಒ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವಿವರಿಸಿದರು.

ಚನ್ನರಾಜ ಹಟ್ಟಿಹೋಳಿ ಅವರು ಸುಳ್ಳು ರಹವಾಸಿ ಪ್ರಮಾಣಪತ್ರ ಸಲ್ಲಿಸಿ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ 2019ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಗಳಾಗಿರುವ ಚನ್ನರಾಜ ಹಟ್ಟಿಹೋಳಿ ಅವರು ಪ್ರಾರಂಭದಲ್ಲಿಯೇ ಕಳ್ಳ ಮಾರ್ಗ ಅನುಸರಿಸಿರುವುದು ಸರಿ ಅಲ್ಲ ಎಂದರು.

ನಕಲಿ ದಾಖಲೆಗಳು ಪಡೆಯುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಇಲ್ಲಿ ಕಾನೂನು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಚನ್ನರಾಜ ಹಟ್ಟಿಹೋಳಿ ಅವರು, ಗೌರವಯುತವಾಗಿ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿರುವ ಅವರು, ಈ ದಿಸೆಯಲ್ಲಿ ಕಠಿಣ ಕ್ರಮಗಳು ಜರುಗದಿದ್ದರೆ ಹೋರಾಟ ಮುಂದುವರೆಯಲಿದೆ ಎಂದರು.

ABOUT THE AUTHOR

...view details