ಬೆಳಗಾವಿ : ಪೇದೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಸಿಆರ್ಪಿಎಫ್ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿದ್ದ ಸದಲಗಾ ಪೊಲೀಸರು ಬಾಸುಂಡೆ ಬರುವ ಹಾಗೆ ಥಳಿಸಿರುವುದು ಬೆಳಕಿಗೆ ಬಂದಿದೆ.
ಯೋಧನಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಪೊಲೀಸರು; ಫೋಟೋ ವೈರಲ್
ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಹಾಗೂ ಪೇದೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಇತ್ತೀಚೆಗೆ ಸಿಆರ್ಪಿಎಫ್ ಯೋಧನನ್ನು ಬಂಧಿಸಲಾಗಿತ್ತು. ನಿನ್ನೆ ಸಂಜೆ ಬಿಡುಗಡೆ ಸಹ ಮಾಡಲಾಯಿತು. ಆದರೆ, ಸದಲಗಾ ಪೊಲೀಸರು ಬಂಧನದ ವೇಳೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎನ್ನಲಾಗುತ್ತಿದ್ದು ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಯೋಧನ ಮೈಮೇಲೆ ಬಾಸುಂಡೆ ಬಿದ್ದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸಚಿನ್ ಸಾವಂತ್ ಅವರನ್ನು ಏ. 23 ರಂದು ಸದಲಗಾ ಪೊಲೀಸರು ಬಂಧಿಸಿದ್ದರು. ಯೋಧನ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂರಿಸಲಾಗಿತ್ತು.
ಯೋಧನನ್ನು ಕಳ್ಳನಂತೆ ನಡೆಸಿಕೊಂಡ ಪೊಲೀಸರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೂ ಮುಂಚೆ ಪೊಲೀಸರು ಯೋಧನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಮೈಮೇಲೆ ಬಾಸುಂಡೆ ಮೂಡಿವೆ. ಐದು ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದ ಯೋಧ ಸಚಿನ್ ಸಾವಂತ್ಗೆ ಚಿಕ್ಕೋಡಿ ಒಂದನೇ ಜೆಎಂಎಫ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ನಿನ್ನೆ ಸಂಜೆ ಸಿಆರ್ಪಿಎಫ್ ಹಿರಿಯ ಅಧಿಕಾರಿಗಳು ಜೈಲಿಗೆ ಆಗಮಿಸಿ ಯೋಧನನ್ನು ಖಾನಾಪುರದಲ್ಲಿರುವ ಕ್ಯಾಂಪ್ಗೆ ಕರೆದೊಯ್ದಿದ್ದರು.