ಚಿಕ್ಕೋಡಿ:ಕರ್ನಾಟಕದ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ಪ್ರಮುಖ ಸ್ಥಾನ ವಹಿಸಿದೆ. ಇಲ್ಲಿ ಏನು ನಿರ್ಣಯ ಆಗುತ್ತೋ, ಅದು ಕರ್ನಾಟದಲ್ಲಿ ತೀರ್ಮಾನ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿ ಜಿಲ್ಲೆಯ ಗೋಕಾಕ್, ಅರಭಾವಿ, ಅಥಣಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಘಟ್ಟಿ ಬಸವಣ್ಣ ಡ್ಯಾಂ, ಗೋಕಾಕ್ ನಗರದ ಘಟಪ್ರಭಾ ಪ್ರವಾಹ ತಡೆಗೆ ತಡೆಗೋಡೆ ಮತ್ತು ಅಥಣಿ ತಾಲೂಕಿನ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಗೆ ಗೋಕಾಕ್ ನಗರದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಬರುವ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು. ಬೆಳಗಾವಿ ಜಿಲ್ಲೆ ಗಂಡುಮೆಟ್ಟಿದ ಸ್ಥಳ. ನಾಡು ಸ್ವಾಭಿಮಾನಿಗಳ ಸ್ಥಳ. ಇದು ಕಷ್ಟಪಟ್ಟು ದುಡಿಯುವ ರೈತರ ಜಿಲ್ಲೆ. ನಿಮ್ಮ ಆಶೀವಾದದಲ್ಲಿ ಬಹುದೊಡ್ಡ ಶಕ್ತಿ ಇದೆ. ನೀವು ಬದಲಾಗಬೇಕು. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡೋಣ ಎಂದು ಪ್ರಶಂಸಿಸಿದರು.
51 ಸಾವಿರ ಹಕ್ಕು ಪತ್ರ ವಿತರಣೆ:ಬಂಜಾರ ಸಮುದಾಯಕ್ಕೆ ಹಕ್ಕುಪತ್ರ ಕೊಟ್ಟಿದ್ದೇ ನಮ್ಮ ಬಿಜೆಪಿ ಸರ್ಕಾರ, ಆ ಸಮುದಾಯ ಕಲ್ಲು ಪ್ರದೇಶದಲ್ಲಿ ವಾಸಿಸುವ ಜನಾಂಗಕ್ಕೆ ನ್ಯಾಯ ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 51 ಸಾವಿರ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದರಲ್ಲೂ ರಾಜಕಾರಣ ಮಾಡುತ್ತಿದೆ. ಇವತ್ತು ಕಾಂಗ್ರೆಸ್ ಪಕ್ಷ ಶಕುನಿ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಸಂಘಟನೆಗಳಿಗೆ ಸಹಾಯಧನ ನೀಡುತ್ತಿದ್ದೇವೆ. ವಿವಿಧ ಇಲಾಖೆ ಹಾಗೂ ಖಾಸಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ 13 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ. ದೇಶದಲ್ಲೇ ರಾಜ್ಯದ ಯುವಜನರಿಗೆ ಹೆಚ್ಚು ಉದ್ಯೋಗ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ಸಿಎಂ ಹೇಳಿದರು.