ಬೆಳಗಾವಿ:ಕಬಲಾಪುರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿ ಮರ ಏರಿ ಕುಳಿತಿದ್ದ ದಂಪತಿಯನ್ನು 48 ಗಂಟೆಗಳ ಬಳಿಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣೆ ಮಾಡಲಾದ ಕಬಲಾಪುರ ಗ್ರಾಮದ ದಂಪತಿಗೆ ಚಿಕಿತ್ಸೆ ಜಿಪಂ ಸಿಇಒ ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾಡಪ್ಪ ಗಿವಾರಿ, ರತ್ನಬಾಯಿ ಗಿವಾರಿ ದಂಪತಿಯನ್ನ ರಕ್ಷಣೆ ಮಾಡಲಾಗಿದೆ. 3 ದಿನಗಳಿಂದ ಸೇನೆ ಮತ್ತು ಎನ್ಡಿಆರ್ಎಫ್ ತಂಡ ನಿರಂತರ ಕರ್ಯಾಚರಣೆ ನಡೆಸಿದ್ದವು. ಆದರೂ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ.
ರಾತ್ರಿ-ಹಗಲು ಮರದಲ್ಲಿ ಮಳೆಯ ಮಧ್ಯೆ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ದಂಪತಿಯನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಜಿ.ಪಂ. ಸಿಇಒ ರಾಜೇಂದ್ರ ಅವರು ದಂಪತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಮೂರು ದಿನದಲ್ಲಿ ಇಬ್ಬರ ಆರೋಗ್ಯ ಸುಧಾರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಭೇಟಿ ನೀಡಿ ದಂಪತಿಯ ಆರೋಗ್ಯ ವಿಚಾರಿಸಿದರು.