ಬೆಳಗಾವಿ :ಬೆಳಗಾವಿ ದೊಡ್ಡ ಜಿಲ್ಲೆ ಆಗಿದ್ದರಿಂದ ಆಡಳಿತ ನಡೆಸುವುದು ಸುಲಭವಲ್ಲ. ಆಡಳಿತ ಸುಗಮವಾಗಿ ನಡೆಯಲು ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ಬಗ್ಗೆ ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ; ಆಡಳಿತ ಸುಗಮವಾಗಲು, ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ್ ಹಾಗೂ ಚಿಕ್ಕೋಡಿ ಕೇಂದ್ರವಾಗಿ ಇನ್ನೆರಡು ಜಿಲ್ಲೆ ರಚನೆ ಆಗಬೇಕಿದೆ ಎಂದರು.
ಈ ವೇಳೆ, ಮಧ್ಯಪ್ರವೇಶಿಸಿದ ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಕೇಂದ್ರವಾಗಿಯೂ ಹೊಸ ಜಿಲ್ಲೆ ಆಗಬೇಕು ಎಂಬ ಬೇಡಿಕೆ ನಮ್ಮದೂ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಬೇಡಿಕೆ ಎಲ್ಲರದ್ದೂ ಇದೆ. ಕುಳಿತು ಚರ್ಚೆ ಮಾಡೋಣ. ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಎನ್ಇಪಿ ವಿಚಾರ : ಹೊಸ ಶಿಕ್ಷಣ ನೀತಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ, ಕೇಂದ್ರ ಸರ್ಕಾರ ರೂಪಿಸಿದ ನೂತನ ಶಿಕ್ಷಣ ನೀತಿಯನ್ನು ನಾವು ಹಿಂದೆಯೂ ಒಪ್ಪಿರಲಿಲ್ಲ. ಈಗಲೂ ಒಪ್ಪುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ಆಗಬಾರದು. ಅದರ ಬಗ್ಗೆ ಶಿಕ್ಷಣ ತಜ್ಞರು, ಪರಿಣತರು ಕೂಡ ತಕರಾರು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಅಭಿಪ್ರಾಯ ಪಟ್ಟಿದ್ದಾರೆ. ತಜ್ಞರ ಹೊಸ ಸಮಿತಿ ರಚಿಸಿ, ಮತ್ತೊಮ್ಮೆ ಪರಾಮರ್ಶೆ ಮಾಡಲಾಗುವುದು. ಅಲ್ಲಿ ಬರುವ ಅಭಿಪ್ರಾಯದ ಮೇಲೆ ಹೆಜ್ಜೆ ಇಡಲಾಗುವುದು ಎಂದರು.
ಗೃಹಲಕ್ಷ್ಮಿ 2000 ಯೋಜನೆ : ಇನ್ನು ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ನೆರವು, ಒಂದು ಮನೆಯಲ್ಲಿ ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಮನೆಯಲ್ಲಿ ಹಿರಿಯರಾದ ಅತ್ತೆಗೆ ಪ್ರಾಧಾನ್ಯತೆ ಕೊಡಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಹಾಗಾಗಿ ಅತ್ತೆಗೆ ಈ ನೆರವು ಸಿಗಲಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಸತೀಶ ಜಾರಕಿಹೊಳಿ, ಅತ್ತೆ ಸೊಸೆಗೆ ಕೊಡಿ ಎಂದು ಕೇಳಿದರೆ ಅವರಿಗೆ ಕೊಡುತ್ತೇವೆ. ಮೊದಲು ಅತ್ತೆಗೆ ಕೊಡುತ್ತೇವೆ. ನಂತರ ಅತ್ತೆ ಪ್ರೀತಿಯಿಂದ ಸೊಸೆಗೆ ಟ್ರಾನ್ಸಫರ್ ಮಾಡಿದರೆ. ಟ್ರಾನ್ಸಫರ್ ಎಂದು ಕೆಳಗಡೆ ಈ ರೀತಿ ಬರೆಯಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವುದು ಅವೈಜ್ಞಾನಿಕ ಮತ್ತು ಅನನುಕೂಲ ಕೂಡ. ನಾನು ವಿರೋಧ ಪಕ್ಷದಲ್ಲಿದ್ದಾಗಲೂ ಇದನ್ನು ವಿರೋಧಿಸಿದ್ದೇನೆ. ಈಗಲೂ ಅದಕ್ಕೆ ಸಹಮತ ಇಲ್ಲ. ಒಂದು ಇಲಾಖೆಯನ್ನು ಇಲ್ಲಿಗೆ ತಂದರೆ ಇನ್ನೊಂದು ಇಲಾಖೆ ಬೆಂಗಳೂರಿನಲ್ಲಿ ಉಳಿಯುತ್ತದೆ. ಒಬ್ಬ ಅಧಿಕಾರಿಯ ಸಹಿಗೆ ಬೆಳಗಾವಿಗೆ, ಇನ್ನೊಬ್ಬರ ಸಹಿಗೆ ಬೆಂಗಳೂರಿಗೆ ಅಲೆದಾಡಬೇಕಾಗುತ್ತದೆ. ಇದು ಸರಿಯಾದ ಕ್ರಮವಲ್ಲ. ಸುವರ್ಣ ಸೌಧವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಬೇಕಾದರೆ ಬೇರೆ ಏನಾದರೂ ಕೆಲಸ ಮಾಡುತ್ತೇವೆ. ಆರು ತಿಂಗಳಿಗೆ ಎರಡು ಬಾರಿ ಇಲ್ಲಿ ಕ್ಯಾಬಿನೆಟ್ ಸಭೆ ಕರೆಯುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಬುಡಾ ಅಕ್ರಮ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ವಿಚಾರದಲ್ಲಿ ಅಕ್ರಮ ನಡಿದಿದೆ ಎಂಬ ಆರೋಪಗಳು ಕೇಳಿಬಂದಿವೆ. 100 ಕೋಟಿಗೂ ಅಧಿಕ ನಷ್ಟವಾಗಿದೆ. ಈ ಪ್ರಕರಣವನ್ನು ಸುಮ್ಮನೇ ಬಿಡುವುದಿಲ್ಲ. ಬುಡಾ ಅಕ್ರಮದ ಬಗ್ಗೆ ಪ್ರತ್ಯೇಕ ಸಭೆ ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ :ಪಠ್ಯಪುಸ್ತಕದ ಯಡವಟ್ಟುಗಳನ್ನ ನಾವು ತಿದ್ದುತ್ತೇವೆ: ಡಾ ಎಚ್. ಸಿ.ಮಹದೇವಪ್ಪ