ಕರ್ನಾಟಕ

karnataka

ETV Bharat / state

ಇಂದಿನಿಂದ ಬೆಳಗಾವಿ ಚಳಿಗಾಲ ಅಧಿವೇಶನ.. ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸಜ್ಜು

ಧಿವೇಶನದಲ್ಲಿ ಸರ್ಕಾರವು ಕೆಲ ಮಹತ್ವದ ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ. ಅಧಿವೇಶನದಲ್ಲಿ ಯಾವೆಲ್ಲ ಮಸೂದೆಗಳು ಮಂಡನೆಯಾಗಲಿವೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ ಸುಮಾರು 8-10 ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ.

Belagavi Winter session
ಬೆಳಗಾವಿ ಚಳಿಗಾಲದ ಅಧಿವೇಶನ

By

Published : Dec 13, 2021, 6:29 AM IST

Updated : Dec 13, 2021, 6:38 AM IST

ಬೆಂಗಳೂರು/ಬೆಳಗಾವಿ :ಇಂದಿನಿಂದ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ. ಹಲವು ವಿಚಾರಗಳನ್ನು ಎತ್ತಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದ್ದರೆ, ಇತ್ತ ಸರ್ಕಾರವೂ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ.

ಇಂದು ಬೆಳಗ್ಗೆ 10.30ಕ್ಕೆ ಬಿಎಸ್​​ಇ ಸಭೆ ನಡೆಯಲಿದೆ. ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯ ಎಲ್ಲಾ ದಿನದ ಕಾರ್ಯ ಕಲಾಪದ ವಿವರಗಳ ಬಗ್ಗೆ ಚರ್ಚೆ ನಡೆಯಲಿದೆ.

ಅಧಿವೇಶನದಲ್ಲಿ ಸರ್ಕಾರವು ಕೆಲ ಮಹತ್ವದ ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ. ಅಧಿವೇಶನದಲ್ಲಿ ಯಾವೆಲ್ಲ ಮಸೂದೆಗಳು ಮಂಡನೆಯಾಗಲಿವೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ ಸುಮಾರು 8-10 ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ.

ಮಂಡನೆಯಾಗುವುದೇ ಮತಾಂತರ ನಿಷೇಧ ವಿಧೇಯಕ?

ಅಧಿವೇಶನದಲ್ಲಿ ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ, ಮತಾಂತರ ನಿಷೇಧ ಕಾನೂನು ಸೇರಿದಂತೆ ಹಲವಾರು ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಕರ್ನಾಟಕ ಕೆಲ ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ:

ರಾಜ-ಮಹಾರಾಜರು, ಬ್ರಿಟಿಷರ ಕಾಲದಲ್ಲಿ ಇನಾಂ ಜಮೀನು ನೀಡಲಾಗಿದ್ದು, ಆಗಿನಿಂದ ಸಾಗುವಳಿ ಮಾಡಿಕೊಂಡಿದ್ದರೂ ನಾನಾ ಕಾರಣಗಳಿಂದ ಅರ್ಜಿ ಸಲ್ಲಿಸಲಾಗದೇ ಭೂಮಿಯ ಒಡೆತನ ಪಡೆಯಲು ಸಾಧ್ಯವಾಗಿಲ್ಲ. ನಿಯಮಾನುಸಾರ ಅರ್ಹರಿಗೆ ಅರ್ಜಿ ಸಲ್ಲಿಸಲು 1 ವರ್ಷ ಕಾಲಾವಕಾಶ ವಿಸ್ತರಿಸಲು 'ಕರ್ನಾಟಕ ಕೆಲವು ಇನಾಂ ಅಬಾಲಿಷನ್‌ ಹಾಗೂ ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ- 2021 ಹಾಗೂ ಸಂಬಂಧಪಟ್ಟ ನಿಯಮಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ :

ಈ ವಿಧೇಯಕದಡಿ ಸರ್ಕಾರಿ ಭೂಮಾಪಕರಿಗೂ ಅನುಮತಿ ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂ ಮಾಪನ ನಕ್ಷೆ(ನಿಗದಿತ ಅರ್ಜಿ ನಮೂನೆ-11ಇ)ಯನ್ನು ಇನ್ನು ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗುವುದು. ಈವರೆಗೆ ಪರವಾನಿಗೆ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಅನುಮತಿ ನೀಡಲಾಗುವುದು.

ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ:

ಈ ವಿಧೇಯಕ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎನ್ನಲಾಗಿದೆ. ವಿಧೇಯಕದಡಿ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯಿಂದ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸುವ ವಿಧೇಯಕ ಇದಾಗಿದೆ. ಪ್ರಸ್ತುತ ವಿಧಿಸುತ್ತಿರುವ ವಾಣಿಜ್ಯ ತೆರಿಗೆಯ ಶೇ. 70 ತೆರಿಗೆಯನ್ನು ಕೈಗಾರಿಕೆಗೆ ಸೀಮಿತಗೊಳಿಸುವ ಹೊಸ ವಿಧೇಯಕ ಮಂಡನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ:

ಈಗಾಗಲೇ ವಿಧೇಯಕದ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರು.ಗಳ ಮರುಪಾವತಿ ಮಾಡುವುದರಿಂದ ಎದುರಾಗುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಈ ವಿಧೇಯಕ ರೂಪಿಸಲಾಗಿದೆ. ಬಿಬಿಎಂಪಿಯು ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಫೀಜು ಮತ್ತು ದಂಡಗಳನ್ನು ಮಾನ್ಯಗೊಳಿಸಲಿದೆ.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿ(ತಿದ್ದುಪಡಿ) ವಿಧೇಯಕ

ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಉದ್ದೇಶಿತ ತಿದ್ದುಪಡಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆ.ಐ.ಎ.ಡಿ.ಬಿ.) ವತಿಯಿಂದ ಜಮೀನು ಹಂಚಿಕೆ ಹಾಗೂ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯಾದ ಜಮೀನಿಗೆ ಕ್ರಯ ಪತ್ರ ನೆರವೇರಿಸುವುದು ಅಂದರೆ ಮಾರಾಟ ಮಾಡುವ ಅಧಿಕಾರ ನೀಡುವುದು ಈ ಹೊಸ ನೀತಿಯ ಉದ್ದೇಶವಾಗಿದೆ.

ಖಾಸಗಿ ಕಂಪನಿಗಳಿಗೆ ಕೆ.ಐ.ಎ.ಡಿ.ಬಿ.ಯಿಂದ ಹಂಚಿಕೆ ಮಾಡುವ ಜಮೀನುಗಳನ್ನು 10 ವರ್ಷಗಳ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲು ತಿದ್ದುಪಡಿ ತರಲಾಗುತ್ತಿದೆ.

ಮತಾಂತರ ನಿಷೇಧ ಮಸೂದೆಯ ಮೇಲೆ ಎಲ್ಲರ ಕಣ್ಣು:

ರಾಜ್ಯದಲ್ಲಿ ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಪರ-ವಿರೋಧದ ಚರ್ಚೆ ಹುಟ್ಟುಹಾಕಿರುವ ಮತಾಂತರ ನಿಷೇಧ ಮಸೂದೆಯನ್ನು ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಮಸೂದೆಗೆ ಕಾಂಗ್ರೆಸ್​ ಸೇರಿದಂತೆ ಕೆಲ ಸಂಘಟನೆಗಳು ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಈ ಮಧ್ಯೆಯೂ ಬಿಜೆಪಿ ಸರ್ಕಾರ ಮಸೂದೆ ಮಂಡಿಸಲಿದೆಯಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸರ್ಕಾರ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಕರಡು ವಿಧೇಯಕವನ್ನೂ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಅಧಿವೇಶನದ ಕೊನೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಧಾರ್ಮಿಕ ಕಟ್ಟಡ(ಸಂರಕ್ಷಣೆ) ವಿಧೇಯಕ 2021ನ್ನು ಮಂಡಿಸಲಾಗಿತ್ತು. ಅದೇ ರೀತಿ ಸರ್ಕಾರ ಬೆಳಗಾವಿ ಅಧಿವೇಶನಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಒಮಿಕ್ರಾನ್ ಆತಂಕ:

10 ದಿನಗಳ ಕಾಲ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಒಮಿಕ್ರಾನ್​ ಭೀತಿ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮೂರನೇ ಪ್ರಕರಣ ಪತ್ತೆಯಾಗುವ ಮೂಲಕ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೊಂದೆಡೆ ಚಳಿಗಾಲದ ಅಧಿವೇಶನ ನಡೆಯಬೇಕಿರುವ ಬೆಳಗಾವಿಗೆ ಅತ್ಯಂತ ಸಮೀಪದಲ್ಲಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಈವರೆಗೆ 17 ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ:ಬೆಳಗ್ಗೆ ಪಾಸಿಟಿವ್​ ಸಂಜೆ ನೆಗೆಟಿವ್​.. ಇಟಲಿಯಿಂದ ಚಂಡೀಗಢಕ್ಕೆ ಬಂದಿದ್ದ ಯುವಕನಿಗಿಲ್ಲ ಒಮಿಕ್ರಾನ್​ ಸೋಂಕು..

Last Updated : Dec 13, 2021, 6:38 AM IST

ABOUT THE AUTHOR

...view details