ಬೆಳಗಾವಿ:ಕೊರೊನಾ ಅಟ್ಟಹಾಸ ಹಾಗೂ ಅತಿವೃಷ್ಟಿಯ ಹೊಡೆತದಿಂದಾಗಿ ಹಬ್ಬಗಳಿಗೆ ಕೆಲವೇ ದಿನಗಳಿದ್ದರೂ ಜಿಲ್ಲೆಯ ಜವಳಿ ವ್ಯಾಪಾರ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ.
ಮಹಾಮಾರಿ ಕೊರೊನಾದ ಅಟ್ಟಹಾಸಕ್ಕೆ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಲಾಕ್‍ಡೌನ್ ಸಡಿಲಿಕೆ ಆದರೂ ವ್ಯಾಪಾರ-ವಹಿವಾಟು ಇನ್ನೂ ಸಹಜ ಸ್ಥಿತಿಗೆ ತಲುಪುತ್ತಿಲ್ಲ. ಹಬ್ಬಗಳ ದಿನಗಳಲ್ಲೂ ಬೆಳಗಾವಿಯ ಟೆಕ್ಸ್ಟೈಲ್ ಬಿಸಿನೆಸ್ ಚೇತರಿಸಿಕೊಂಡಿಲ್ಲ. ಗಡಿ ಜಿಲ್ಲೆ ಬೆಳಗಾವಿಯು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಮೂರು ರಾಜ್ಯಗಳ ಜನರೂ ಬೆಳಗಾವಿಯಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ಮಾಡುತ್ತಾರೆ. ದಸರಾ ಮುಗಿದಿದ್ದು, ಇದೀಗ ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಆದರೆ ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮಿಸುವ ಉತ್ಸಾಹವನ್ನು ಜನತೆ ಕಳೆದುಕೊಂಡಿದ್ದಾರೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಬಹುತೇಕ ಸುಪ್ರಸಿದ್ಧ ಜವಳಿ ಮಳಿಗೆಗಳು ಬಿಕೋ ಎನ್ನುತ್ತಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.
ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾರ್ಚ್ ತಿಂಗಳಿನಿಂದ ಏಪ್ರಿಲ್‍ವರೆಗೆ ಲಾಕ್‍ಡೌನ್ ಜಾರಿಗೊಳಿಸಿತ್ತು. ಮಾರ್ಚ್ನಿಂದ ಜೂನ್‍ವರೆಗೆ ಮದುವೆ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದವು. ಕೇಂದ್ರ ಸರ್ಕಾರವು ಮದುವೆ ಸಮಾರಂಭಗಳನ್ನು ಸರಳವಾಗಿ ಮಾಡುವಂತೆ ಸೂಚಿಸಿದ ಕಾರಣದಿಂದಾಗಿ ಬಟ್ಟೆಗಳ ಖರೀದಿ ಭರಾಟೆಯೂ ಅಷ್ಟೇನಿರಲಿಲ್ಲ. ದಸರಾ ಹಬ್ಬಕ್ಕೆ ವ್ಯಾಪಾರ ಸಹಜ ಸ್ಥಿತಿಗೆ ತಲುಪುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮಾಲೀಕರು ನಿರಾಸೆ ಅನುಭವಿಸುವಂತಾಯಿತು. ಇದೀಗ ದೀಪಾವಳಿ ಹಬ್ಬದ ಮೇಲೆ ಮಾಲೀಕರು ಭರವಸೆ ಇಟ್ಟುಕೊಂಡಿದ್ದರೂ ಗ್ರಾಹಕರು ಮಾತ್ರ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ಮದುವೆ ಸಮಾರಂಭಗಳ ಸೀಜನ್‍ವರೆಗೂ ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಬರಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನು ಅತಿಹೆಚ್ಚು ನೇಕಾರರು ಈ ಜಿಲ್ಲೆಯಲ್ಲಿದ್ದು, ಕೊರೊನಾ ಕಾರಣಕ್ಕೆ ಸೀರೆಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ. ಸೀರೆಗಳನ್ನು ಖರೀದಿಸಿ ನೇಕಾರರ ನೆರವಿಗೆ ನಿಲ್ಲುವುದಾಗಿ ಹೇಳಿದ್ದ ಸರ್ಕಾರ ಕೂಡ ಮೌನಕ್ಕೆ ಶರಣಾಗಿದ್ದು, ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸಾಲಮಾಡಿ ವಿದ್ಯುತ್ ಮಗ್ಗ ಖರೀದಿಸಿದ್ದ 6 ಕ್ಕೂ ಅಧಿಕ ನೇಕಾರರು ನೇಯ್ದ ಸೀರೆಗಳು ವ್ಯಾಪಾರವಾಗದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜವಳಿ ಸಚಿವ ಶ್ರೀಮಂತ ಪಾಟೀಲ ಅವರ ತವರು ಜಿಲ್ಲೆಯ ನೇಕಾರರ ಬದುಕೇ ಇದೀಗ ಅತಂತ್ರವಾಗಿದ್ದು, ಇನ್ನಾದರೂ ಸುಧಾರಿಸುತ್ತಾ ಕಾದು ನೋಡಬೇಕಿದೆ.