ಕರ್ನಾಟಕ

karnataka

ETV Bharat / state

ಅನಂತ್ ಕುಮಾರ್, ಪರಿಕ್ಕರ್ ಕುಟುಂಬಕ್ಕೆ ಸಿಗದ ಬಿಜೆಪಿ ಟಿಕೆಟ್: ಅಂಗಡಿ ಕುಟುಂಬಕ್ಕೆ ಸಿಕ್ಕಿದ್ದು ಹೇಗೆ? - Suresh Angadi family get bjp ticket

ಅನಂತ್ ಕುಮಾರ್, ಪರಿಕ್ಕರ್ ಕುಟುಂಬಕ್ಕೆ ಬಿಜೆಪಿ ಟಿಕೆಟ್​ ನೀಡದ ಹಿನ್ನೆಲೆಯಲ್ಲಿ ಅಂಗಡಿ ಕುಟುಂಬಕ್ಕೆ ಟಿಕೆಟ್ ಸಿಗುವುದಿಲ್ಲ. ಕುಟುಂಬಕ್ಕೆ ಬಿಜೆಪಿ ಮಣೆ ಹಾಕುವುದಿಲ್ಲ ಎಂಬಿತ್ಯಾದಿ ಮಾತುಗಳು ಕೇಳಿಬಂದಿದ್ದವು. ಆದ್ರೆ ಇದೀಗ ಬಿಜೆಪಿ ಸುರೇಶ್​ ಅಂಗಡಿ ಪತ್ನಿಗೆ ಟಿಕೆಟ್​ ನೀಡಿದ್ದು ಹೇಗೆ? ಎಂಬ ವಿಷಯ ಬಹಳ ಚರ್ಚೆಯಾಗುತ್ತಿದೆ.

Suresh Angadi family get bjp ticket
ಅನಂತಕುಮಾರ್, ಪರಿಕ್ಕರ್ ಕುಟುಂಬಕ್ಕೆ ಸಿಗದ ಬಿಜೆಪಿ ಟಿಕೆಟ್

By

Published : Mar 26, 2021, 7:34 PM IST

ಬೆಳಗಾವಿ: ಭಾರತೀಯ ಜನತಾ ಪಕ್ಷಕ್ಕೆ ಸುದೀರ್ಘ ಸೇವೆ ಸಲ್ಲಿಸಿ ನಿಧನರಾದ ರಾಜ್ಯದ ದಿ. ಅನಂತ ಕುಮಾರ್ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಕುಟುಂಬಕ್ಕೆ ಸಿಗದ ಬಿಜೆಪಿ ಟಿಕೆಟ್, ದಿ. ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್​ ಸಿಕ್ಕಿದ್ದು ಹೇಗೆ ಎಂಬ ವಿಷಯ ಇದೀಗ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿದೆ.

ಮೂರು ದಶಕಗಳ ಸೇವೆ ಸಲ್ಲಿಸಿ, ನಾಲ್ಕು ಸಲ ಬೆಳಗಾವಿ ಕ್ಷೇತ್ರದ ಸಂಸದರಾಗಿದ್ದ ಸುರೇಶ ಅಂಗಡಿ ನರೇಂದ್ರ ಮೋದಿ ನೇತೃತ್ವದ ಹಾಲಿ ಸರ್ಕಾರದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಸುರೇಶ ಅಂಗಡಿ ಅವರು ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಹಾಮಾರಿ ಕೊರೊನಾಗೆ ಅಂಗಡಿ ಬಲಿಯಾದರು. ಇವರ ನಿಧನದಿಂದ ತೆರವಾಗಿದ್ದ, ಬೆಳಗಾವಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯೂ ಆಗಿದೆ. ಕೈ-ಕಮಲ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿವೆ. ಆದರೆ ಅಂಗಡಿ ಕುಟುಂಬಕ್ಕೆ ಟಿಕೆಟ್ ಸಿಗುವುದಿಲ್ಲ. ಕುಟುಂಬಕ್ಕೆ ಬಿಜೆಪಿ ಮಣೆ ಹಾಕುವುದಿಲ್ಲ ಎಂಬಿತ್ಯಾದಿ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಅನಂತಕುಮಾರ್ ಹಾಗೂ ಮನೋಹರ್ ಪರಿಕ್ಕರ್ ಕುಟುಂಬದ ಉದಾಹರಣೆ ನೀಡಿ ವಿಶ್ಲೇಷಿಸಲಾಗುತಿತ್ತು.

ಆದರೆ ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಘೋಷಿಸಿದ್ದು, ಸುರೇಶ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಹಾಗೂ ಮನೋಹರ ಪರಿಕ್ಕರ್ ಕುಟುಂಬಸ್ಥರು ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಈ ಎರಡೂ ಕುಟುಂಬಕ್ಕೆ ಬಿಜೆಪಿ ನಾಯಕರು ಟಿಕೆಟ್ ನೀಡಿರಲಿಲ್ಲ.

ಇದನ್ನೂ ಓದಿ: ಬೈ ಎಲೆಕ್ಷನ್​ಗೆ ಬಿಜೆಪಿ ರಣತಂತ್ರ: ಅನುಕಂಪ, ಅಭಿವೃದ್ಧಿ, ಜಾತಿ ಅಸ್ತ್ರ ಪ್ರಯೋಗ

ಈ ಕಾರಣಕ್ಕೆ ಜಿಲ್ಲೆಯ ಘಟಾನುಘಟಿ ಬಿಜೆಪಿ ನಾಯಕರು ಟಿಕೆಟ್‍ಗಾಗಿ ದೆಹಲಿಯಲ್ಲಿ ಠಿಕಾಣಿ ಹೂಡಿ ತೀವ್ರ ಲಾಬಿ ನಡೆಸಿದ್ದರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಾಜಿ ಸಂಸದ ರಮೇಶ ಕತ್ತಿ, ವೈದ್ಯರಾದ ಡಾ. ಗಿರೀಶ ಸೋನವಾಲ್ಕರ್, ಡಾ.ರವಿ ಪಾಟೀಲ, ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಸೇರಿದಂತೆ ಸ್ಥಳೀಯ ನಾಯಕರು ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಗೇಮ್‍ಪ್ಲ್ಯಾನ್ ಬದಲಾಯಿಸಿದ ಬಿಜೆಪಿ ಹೈಕಮಾಂಡ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿರುವುದು ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.

ರಾಸಲೀಲೆ ಸಿಡಿಯಿಂದ ಮುಜುಗರ:

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬರುವ ಗೋಕಾಕ ಹಾಗೂ ಅರಬಾಂವಿ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುತ್ತಾರೆ. ಚುನಾವಣೆ ಹೊಸ್ತಿಲಲ್ಲೇ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆ ಆಗಿರುವುದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ರಾಸಲೀಲೆ ಪ್ರಕರಣದಿಂದ ಇತ್ತ ರಮೇಶ ಜಾರಕಿಹೊಳಿ ಮಂತ್ರಿಸ್ಥಾನ ಕಳೆದುಕೊಂಡಿದ್ದರೆ, ಅತ್ತ ಬಿಜೆಪಿಯು ಮುಜುಗರ ಅನುಭವಿಸುವಂತಾಯಿತು. ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಇದೀಗ ಕಾನೂನು ಹೋರಾಟದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಅಥವಾ ಹೊಸ ಮುಖಕ್ಕೆ ಮಣೆ ಹಾಕಿದ್ರೆ ಇಂಥ ವಾತಾವರಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಅಸಾಧ್ಯ ಎಂಬುವುದನ್ನು ಅರಿತಕೊಂಡ ಬಿಜೆಪಿ ನಾಯಕರು ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ದಾರೆ. ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವುದರಿಂದ ಅನುಕಂಪದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬಹುದು ಎಂಬುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಸತೀಶ ಸ್ಪರ್ಧೆಯಿಂದ ಬದಲಾಯ್ತು ಗೇಮ್ ಪ್ಲ್ಯಾನ್

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಗುವುದು ನಿಶ್ಚಿತವಾಗಿತ್ತು. ಸತೀಶ ಜಾರಕಿಹೊಳಿ ಎರಡು ಸಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಸತೀಶ ಸ್ಪರ್ಧೆ ಬಿಜೆಪಿಯ ಅಭ್ಯರ್ಥಿಯ ಗೆಲುವು ತುಸು ಕಷ್ಟವಾಗಬಹುದು ಎಂಬ ಮಾಹಿತಿಯೂ ಹೈಕಮಾಂಡ್ ರವಾನೆ ಆಗಿತ್ತು. ಬಿಜೆಪಿ ಕೋರ್​​ಕಮಿಟಿ ಸಭೆಯಲ್ಲಿ ಅಂಗಡಿ ಕುಟುಂಬವನ್ನು ಪರಿಗಣಿಸಬೇಕು ಎಂಬ ಬಗ್ಗೆಯಷ್ಟೇ ಚರ್ಚೆ ಆಗಿತ್ತು. ಆದರೆ ಹೈಕಮಾಂಡ್ ಹೊಸ ಮುಖ ಇಲ್ಲವೇ ಪಕ್ಷದ ಕಾರ್ಯತರ್ಕರಿಗೆ ಟಿಕೆಟ್ ನೀಡುವ ಚಿಂತನೆಯಲ್ಲಿತ್ತು.

ನ್ಯಾಯವಾದಿ ಎಂ.ಬಿ. ಝಿರಲಿ, ಡಾ. ರವಿ ಪಾಟೀಲ, ಡಾ.ಗಿರೀಶ ಸೋನವಾಲ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ ಹಾಗೂ ಡಾ. ವಿಶ್ವನಾಥ ಪಾಟೀಲ ಈ ಐವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ಸತೀಶ ಜಾರಕಿಹೊಳಿ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಜೆಪಿ ಅನುಕಂಪ ಅಸ್ತ್ರ ಪ್ರಯೋಗಿಸಿದೆ. ಕೊನೆ ಕ್ಷಣದಲ್ಲಿ ತನ್ನ ಗೇಮ್‍ಪ್ಲ್ಯಾನ್ ಬದಲಿಸಿದ ಬಿಜೆಪಿ ನಾಯಕರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅನುಕಂಪದ ಆಟ ಆಡುವ ಪ್ಲ್ಯಾನ್ ಮಾಡಿತು. ಅಲ್ಲದೇ ನಿರೀಕ್ಷೆಗೂ ಮೀರಿದ್ದ ಆಕಾಂಕ್ಷಿಗಳನ್ನು ಸಮಾಧಾನ ಮಾಡಲು ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವುದು ಕೂಡ ಬಿಜೆಪಿಗೆ ಅನಿವಾರ್ಯವಾಯಿತು ಎನ್ನುತ್ತಿವೆ ಬಿಜೆಪಿ ಮೂಲಗಳು.

ABOUT THE AUTHOR

...view details