ಬೆಳಗಾವಿ:ಜಿಲ್ಲೆಯಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ ಊಟ ಮಾಡಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬನಲ್ಲಿ ಇದೀಗ ಕಣ್ಣಿನ ದೋಷ ಕಂಡುಬಂದಿದೆ. ಬಾಬಾಸಾಬ ಖುತುಬುದ್ದೀನ್ ಬೇಗ್ (32) ಕಣ್ಣಿನ ದೋಷಕ್ಕೊಳಗಾದ ವ್ಯಕ್ತಿ. ಇವರ ಎರಡೂ ಕಣ್ಣುಗಳಲ್ಲಿ ದೋಷ ಕಂಡುಬಂದಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಘಟನೆಯ ಹಿನ್ನೆಲೆ: ಹಿರೋಕೋಡಿ ಗ್ರಾಮದಲ್ಲಿ ಸೋಮವಾರ (ಆ.28) ನಡೆದ ಪಟೇಲ್ ಕುಟುಂಬದ ಮದುವೆ ಮನೆಯಲ್ಲಿ ಊಟ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಅಸ್ವಸ್ಥರಲ್ಲಿ ಬಾಬಾಸಾಬ್ ಕೂಡ ಒಬ್ಬರು. ಅಂದು ಊಟ ಮಾಡಿ ಮನೆಗೆ ವಾಪಸ್ ಆದ ಬಳಿಕ ಬಾಬಾಸಾಬ್ಗೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಬಳಿಕ ಅವರ ದೃಷ್ಟಿಯಲ್ಲಿ ದೋಷ ಕಂಡುಬಂದಿದೆ. ತಕ್ಷಣ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬುಧವಾರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಪತಿಯ ಆರೈಕೆ ಮಾಡುತ್ತಿರುವ ಪತ್ನಿ ರುಕ್ಸಾನಾ ಮಾಧ್ಯಮಗಳ ಜೊತೆಗೆ ಮಾತನಾಡಿ, ''ಮದುವೆಗೆ ಹೋಗಿ ಊಟ ಮಾಡಿ ಬಂದ ಬಳಿಕ ನಮ್ಮ ಯಜಮಾನರ ಕಣ್ಣುಗಳಲ್ಲಿ ದೋಷ ಕಂಡುಬಂದಿದೆ. ಆರಂಭದಲ್ಲಿ ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಗುಣಮುಖ ಆಗೋದಿಲ್ಲ, ಮಿರಜ್ಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಬೆಳಗಾವಿಯೇ ಸಮೀಪ ಆಗುತ್ತದೆ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಈಗ ಜಿಲ್ಲಾಸ್ಪತ್ರೆಯ ವೈದ್ಯರು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ'' ಎಂದರು.