ಬೆಳಗಾವಿ:ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆದ ಬಳಿಕ ಈರಣ್ಣ ಕಡಾಡಿ ಅವರಿಂದು ತವರು ಜಿಲ್ಲೆಗೆ ಆಗಮಿಸಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಮತ್ತೆ ಬಿಜೆಪಿಗೆ: ರಾಜ್ಯಸಭೆ ನೂತನ ಸದಸ್ಯ ಈರಣ್ಣ ಕಡಾಡಿ ವಿಶ್ವಾಸ
ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆದ ಬಳಿಕ ಈರಣ್ಣ ಕಡಾಡಿ ಅವರಿಂದು ತವರು ಜಿಲ್ಲೆಗೆ ಆಗಮಿಸಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 7ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿಯನ್ನು ಬಿಜೆಪಿಯವರೇ ಹಿಡಿಯುತ್ತಾರೆ. ಬೆಳಗಾವಿಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರಿಗೂ ಜವಾಬ್ದಾರಿಗಳಿವೆ. ಸಹಕಾರಿ ಕ್ಷೇತ್ರ ಹಾಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಬಿಜೆಪಿಯವರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ರಾಜ್ಯಸಭೆ ಸದಸ್ಯನಾಗುವ ಅವಕಾಶ ನೀಡಿದೆ. ನಾಯಕರ ಹಾಗೂ ಕಾರ್ಯಕರ್ತರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ. ಸಾಮಾನ್ಯರೂ ರಾಜ್ಯಸಭೆ ಪ್ರವೇಶಿಸಬಹುದು ಎಂಬುದನ್ನು ನಮ್ಮ ನಾಯಕರು ತೋರಿಸಿಕೊಟ್ಟಿದ್ದಾರೆ. ನಮ್ಮ ಆಯ್ಕೆ ಬಗ್ಗೆ ಬೇರೆ ಪಕ್ಷಗಳಲ್ಲಿ ಚಟುವಟಿಕೆ ತೀವ್ರಗೊಂಡಿದೆ. ಪರಿಷತ್ ಸದಸ್ಯರ ಆಯ್ಕೆ ಬಗ್ಗೆ ನಮ್ಮ ನಾಯಕರು ನಿರ್ಧರಿಸುತ್ತಾರೆ. ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.