ಬೆಳಗಾವಿ: ಬರಗಾಲ ಹಿನ್ನೆಲೆ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಸ್ಪಂದಿಸುವುದು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ರೈತರಿಗೆ ಪರಿಹಾರ ಕೊಡುವ ಪ್ರಾಮಾಣಿಕ ಕಳಕಳಿ ಇವರಿಗಿಲ್ಲ. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ. ಇಂದು ಸದನದಲ್ಲಿ ಬರಗಾಲ ವಿಷಯದ ಚರ್ಚೆಯಲ್ಲಿ ಈ ವಿಚಾರಗಳನ್ನು ಚರ್ಚಿಸುತ್ತೇವೆ ಎಂದರು.
ಅಧಿವೇಶನ ಸಂದರ್ಭದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ನಮಗೆ 136 ಶಾಸಕರ ಬೆಂಬಲವಿದೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಇದೆಲ್ಲವನ್ನು ಸದನದಲ್ಲಿ ನಾವು ಪ್ರಶ್ನಿಸುತ್ತೇವೆ ಎಂದು ವಿಜಯೇಂದ್ರ ಗುಡುಗಿದರು.
ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಬಗ್ಗೆ ನಿನ್ನೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಅಧಿವೇಶನ ನಡೆಯುವ ಸಂದರ್ಭದಲ್ಲೇ ಬಿಜೆಪಿಯ ದಲಿತ ಮುಖಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಆಗಿದೆ. ಪೊಲೀಸ್ ಅಧಿಕಾರಿಗಳು ಜಸ್ಟ್ ಕೇಸ್ ಮಾತ್ರ ದಾಖಲು ಮಾಡಿದ್ದಾರೆ. ಕೊಲೆ ಯತ್ನ ಕೇಸ್ ಹಾಕೋದಿಲ್ಲ, 307 ಕೇಸ್ನ್ನೂ ಹಾಕಿಲ್ಲ ಎಂದು ಆರೋಪಿಸಿದರು.