ಕರ್ನಾಟಕ

karnataka

By ETV Bharat Karnataka Team

Published : Dec 13, 2023, 11:05 PM IST

ETV Bharat / state

3542.10 ಕೋಟಿ ರೂ. ಮೊತ್ತದ ಮೊದಲ ಕಂತಿನ ಪೂರಕ ಅಂದಾಜು ವೆಚ್ಚಗಳಿಗೆ ವಿಧಾನಸಭೆ ಅಂಗೀಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2023-24ನೇ ಸಾಲಿನ ಮೊದಲನೇ ಪೂರಕ ಅಂದಾಜುಗಳ ವೆಚ್ಚಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದೆ.

Etv Bharat
Etv Bharat

ಬೆಳಗಾವಿ :ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2023-24ನೇ ಸಾಲಿನ ಮೊದಲನೇ ಪೂರಕ ಅಂದಾಜುಗಳ ವೆಚ್ಚ ರೂ.3542.10 ಕೋಟಿಗಳಿಗೆ ಅಂಗೀಕಾರ ದೊರಕಿದೆ. ಸದನದ ಅಂಗೀಕಾರ ಕೋರಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಿಂದೆ ಜುಲೈನಲ್ಲಿ ರೂ.3,41,321 ಕೋಟಿಗಳ ಆಯವ್ಯಯ ಮಂಡಿಸಲಾಗಿತ್ತು. ಆಯವ್ಯಯದಲ್ಲಿ ಘೋಷಿಸಿದ ಹೊರತಾಗಿ ಸರ್ಕಾರದ ಕೆಲವು ಖರ್ಚುಗಳಿಗೆ ರಾಜ್ಯದ ತುರ್ತು ನಿಧಿಯಡಿ ಅನುದಾನವನ್ನು ಒದಗಿಸಲಾಗಿದೆ. ಹೀಗೆ ವೆಚ್ಚ ಮಾಡಿದ ಮೊಬಲಗನ್ನು ತೋರಿಸುವ ಪೂರಕ ಅಂದಾಜು ವಿವರಣೆಯನ್ನು ರಾಜ್ಯದ ಸದನದಲ್ಲಿ ಇಟ್ಟು ಒಪ್ಪಿಗೆ ಪಡೆದುಕೊಳ್ಳಬೇಕು. ಈಗ ಮಂಡಿಸಿದ ಪೂರಕ ಅಂದಾಜಿನ ಗಾತ್ರ 2023-24ರ ಆಯವ್ಯಯದ ಶೇ.1 ರಷ್ಟು ಮಾತ್ರ ಎಂದು ತಿಳಿಸಿದರು.

ಮೊದಲನೇ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ ರೂ.3542.10 ಕೋಟಿಯಲ್ಲಿ ರೂ.17.66 ಕೋಟಿ ಪ್ರಬೃತ ವೆಚ್ಚ ಮತ್ತು ರೂ.3524.44 ಕೋಟಿ ಪುರಸ್ಕೃತ ವೆಚ್ಚಗಳು ಸೇರಿವೆ. ಇದರಲ್ಲಿ ರೂ.326.98 ಕೋಟಿ ರಿಸರ್ವ್ ಫಂಡ್ ಠೇವಣಿ ಹಾಗೂ ಎಸ್.ಎನ್.ಎ ಖಾತೆಗಳಿಂದ ಭರಿಸಲಾಗುವುದು. ರೂ.684.28 ಕೋಟಿ ಕೇಂದ್ರ ಸರ್ಕಾರ ಸಹಾಯಕ್ಕೆ ಸಂಬಂಧಿಸಿವೆ ಎಂದರು.

ಪೂರಕ ಅಂದಾಜಿನಲ್ಲಿ ರೂ.915 ಕೋಟಿ ಬಂಡವಾಳ ವೆಚ್ಚವಾಗಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಎಸ್.ಇ.ಪಿ ಹಾಗೂ ಟಿ.ಎಸ್.ಪಿ ಯೋಜನೆಗೆ ರೂ.508 ಕೋಟಿ, ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ರೂ.502 ಕೋಟಿ, ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ ರೂ.310 ಕೋಟಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಸಾಗಣಿಕೆ ವೆಚ್ಚಗಳಿಗೆ ರೂ.297 ಕೋಟಿ, ಎಸ್.ಸಿ.ಡಿ.ಎಸ್‌ಗೆ ರೂ.284 ಕೋಟಿ, ಉಗ್ರಾಣ ನಿಗಮಕ್ಕೆ ಸಾಲವಾಗಿ ರೂ.229 ಕೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲು ರೂ.189 ಕೋಟಿ, ನಬಾರ್ಡ ರಸ್ತೆಗಳಿಗೆ ರೂ.150 ಕೋಟಿ, ಕೇಂದ್ರದ ಹದಿಹರೆಯದ ಗ್ರಂಥಾಲಯ ಇ ಲೈಬ್ರರಿಗೆ ಯೋಜನೆಗೆ ರಾಜ್ಯದ ಪಾಲಾಗಿ ರೂ.132 ಕೋಟಿ, ಕೃಷಿ ಭಾಗ್ಯ ಯೋಜನೆಗೆ ರೂ.100 ಸೇರಿದಂತೆ ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕಂದಾಯ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಮತ್ತು ವಸತಿ, ಲೋಕೋಪಯೋಗಿ, ನೀರಾವರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆರ್ಥಿಕ ಇಲಾಖೆಗಳಿಗೆ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ರೂ.39,000 ಕೋಟಿಗಳ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ನಡುವೆಯು ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರಲಾಗಿದೆ. ಹಿಂದಿನ ಸರ್ಕಾರಗಳು ಸಹ ಪೂರಕ ಅಂದಾಜು ಮಂಡಿಸಿವೆ. ಸದನವು 2023-24ನೇ ಸಾಲಿನ ಪೂರಕ ಅಂದಾಜಿಗೆ ಅಂಗೀಕಾರ ನೀಡುವಂತೆ ಕೋರಿದರು. ಪೂರಕ ಅಂದಾಜಿನ ಧನವಿಯೋಗಕ್ಕೆ ಅನ್ವಯವಾಗುವಂತೆ 2023ನೇ ಸಾಲಿನ ಕರ್ನಾಟಕ ಧನವಿನಯೋಗ ಸಂಖ್ಯೆ-4 ವಿಧೇಯಕವನ್ನು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಚರ್ಚೆಯ ನಂತರ ಸದನದಲ್ಲಿ ಪೂರಕ ಅಂದಾಜು ಹಾಗೂ ಧನವಿನಯೋಗ ವಿಧೇಯಕಕ್ಕೆ ಪ್ರತಿಪಕ್ಷಗಳ ಜಟಾಪಟಿ ಮಧ್ಯೆ ಅನುಮೋದನೆ ನೀಡಿ ಅಂಗೀಕರಿಸಲಾಯಿತು.

ಪೂರಕ ಅಂದಾಜು ವೆಚ್ಚದ ಹೈಲೈಟ್ಸ್ :

  • ಶಾಸಕರಿಗೆ ಹೊಸ ಕಾರುಗಳ ಖರೀದಿಗೆ ಹೆಚ್ಚುವರಿಯಾಗಿ 4 ಕೋಟಿ ರೂ.
  • ಡಿಸಿಎಂ ಮತ್ತು ಮಂತ್ರಿಗಳ ಕಚೇರಿಗಳ ವೆಚ್ಚಕ್ಕೆ ಹೆಚ್ಚುವರಿಯಾಗಿ 2.71 ಕೋಟಿ ರೂ.
  • ವಿಷ್ಣು ಸ್ಮಾರಕಕ್ಕೆ ಹೆಚ್ಚುವರಿಯಾಗಿ 75.47 ಲಕ್ಷ ರೂ.
  • ದಸರಾ ಆಚರಣೆಗೆ ಹೆಚ್ಚುವರಿಯಾಗಿ 8.5 ಕೋಟಿ ರೂ.
  • ದಸರಾ ಸಿಎಂ ಕಪ್ ಗೆ 4.85 ಕೋಟಿ ರೂ.
  • ಮುಂದಿನ ಜನವರಿಯಲ್ಲಿ ದಾವೋಸ್ ನಲ್ಲಿ ನಡೆಯಲಿರುವ ವರ್ಲ್ಡ್ ಎಕಾನಾಮಿಕ್ ಫೋರಂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಸಿಎಂ ನೇತೃತ್ವದ ನಿಯೋಗಕ್ಕೆ 12 ಕೋಟಿ ರೂ.
  • ಬೃಹತ್ ಕೈಗಾರಿಕಾ ಸಚಿವರ ನೇತೃತ್ವದ ನಿಯೋಗ ಮುಂದಿನ ವರ್ಷ ಅಮೆರಿಕ ಭೇಟಿಗೆ 14.25 ಕೋಟಿ ರೂ.
  • 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಾಕಿ ಬಿಲ್ ಗಳ ಪಾವತಿಗೆ 4.66 ಕೋಟಿ ರೂ.
  • ಕರ್ನಾಟಕ ಸಂಭ್ರಮ 50 ರ ಆಚರಣೆಗೆ ಹೆಚ್ಚುವರಿಯಾಗಿ 5 ಕೋಟಿ ರೂ.
  • ಸ್ಪೀಕರ್ ಗೆ ಹೊಸ ಕಾರು ಖರೀದಿಗೆ ಹೆಚ್ಚುವರಿಯಾಗಿ 36 ಲಕ್ಷ ರೂ, ಡೆಪ್ಯುಟಿ ಸ್ಪೀಕರ್ ಗೆ ಹೊಸ ಕಾರು ಖರೀದಿಗೆ ಹೆಚ್ಚುವರಿಯಾಗಿ 8 ಲಕ್ಷ ರೂ.
  • ಗೃಹಲಕ್ಷ್ಮಿ ನಿಧಿ ಕೊಡ್ತಿರುವ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಗೆ ಅತೀ ಹೆಚ್ಚು 610.70 ಕೋಟಿ ರೂ.

ಇದನ್ನೂ ಓದಿ :ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಮತ್ತು ಆಘಾತಕಾರಿ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details