ಬೆಳಗಾವಿ: ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಕೋರ್ ಕಮಿಟಿ ಸದಸ್ಯ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ವಿಷಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಯಾರು ಸಚಿವರಾಗಬೇಕು ಎಂಬ ವಿಷಯವೂ ಚರ್ಚೆಗೆ ಬಂದಿಲ್ಲ. ಆದರೆ ಕೇಂದ್ರ ನಾಯಕರ ಜತೆಗೆ ಚರ್ಚಿಸಿ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಸಂಪುಟ ವಿಸ್ತರಣೆ ಪರಮಾಧಿಕಾರ ಸಿಎಂ ಅವರಿಗಿದೆ ಎಂದಿದ್ದಾರೆ.
ಅರವಿಂದ ಲಿಂಬಾವಳಿ, ಕೋರ್ ಕಮಿಟಿ ಸದಸ್ಯ ಸಂಪುಟ ವಿಸ್ತರಣೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡುವ ನಮ್ಮ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದು, ಲವ್ ಜಿಹಾದ್ ತಡೆ ಹಾಗೂ ಗೋಹತ್ಯೆ ಕಾನೂನು ಜಾರಿಗೆ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಪ್ರೀತಿಸುವುದು ತಪ್ಪಲ್ಲ, ಆದರೆ ಪ್ರೀತಿಯ ಹೆಸರಲ್ಲಿ ಮತಾಂತರಕ್ಕೆ ಕುಮ್ಮಕ್ಕು ಕೊಡುವುದು ಸರಿಯಲ್ಲ. ಈ ಕಾರಣಕ್ಕೆ ಲವ್ ಜಿಹಾದ್ ತಡೆ ಕಾನೂನು ತರಲು ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಗೋಹತ್ಯೆ ನಿಷೇಧ ಆಗಬೇಕು ಎಂದು ನಮ್ಮ ಸರ್ಕಾರ ಈ ಹಿಂದೆ ನಿರ್ಣಯ ಕೈಗೊಂಡಿತ್ತು. ವಿಧಾನಸಭೆ ಅಧಿವೇಶನ ವೇಳೆ ಮಸೂದೆ ಪಾಸ್ ಮಾಡಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಆಗ ರಾಜ್ಯಪಾಲರು ಅಂಕಿತ ಹಾಕದೇ ತಿರಸ್ಕರಿಸಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ಕತ್ತಲ ಕೋಣೆಯಲ್ಲಿ ಇಟ್ಟಿತ್ತು. ಇದೀಗ ನಮ್ಮದೇ ಸರ್ಕಾರ ಅಸ್ತಿತ್ವದಲ್ಲಿದ್ದು, ಗೋಹತ್ಯೆ ನಿಷೇಧ ಜಾರಿಗೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದರು.
ಬಿಜೆಪಿ ಕಾರ್ಯಕರ್ತರ ಪಕ್ಷ, ಮೂರು ವರ್ಷಕ್ಕೊಮ್ಮೆ ಬೂತ್ ಕಮಿಟಿ ಬದಲಾಗುತ್ತವೆ. ಬದಲಾದ ಸಂದರ್ಭದಲ್ಲಿ ಪ್ರಶಿಕ್ಷಣ ವರ್ಗ ನಡೆಯುತ್ತದೆ. ರಾಜ್ಯದಲ್ಲಿ 310 ಬಿಜೆಪಿ ಮಂಡಲಗಳಿದ್ದು, 270 ಪ್ರಶಿಕ್ಷಣದ ತರಬೇತಿ ಶಿಬಿರ ಮುಕ್ತಾಯವಾಗಲಿದೆ. ಗ್ರಾಮ ಪಂಚಾಯತಿ ಚುನಾವಣೆಯನ್ನುಬಿಜೆಪಿ ಗಂಭೀರವಾಗಿ ಪರಗಣಿಸಿದೆ. ಜಿಲ್ಲಾ ಬಿಜೆಪಿ ಉಸ್ತುವಾರಿಗಳು ಗ್ರಾ.ಪಂ. ಚುನಾವಣೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ 6 ತಂಡಗಳು 30 ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.