ಬೆಳಗಾವಿ :ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೂ ಕೆಪಿಸಿಸಿ ವಕ್ತಾರರಾಗಿ ಜವಾಬ್ದಾರಿ ವಹಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಇನ್ಮೇಲೆ ಕಾಂಗ್ರೆಸ್ ವಕ್ತಾರರು ಬೆಳಗ್ಗೆಯಷ್ಟೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಿಸಲಾಗಿತ್ತು. ಮಧ್ಯಾಹ್ನ ಮತ್ತೊಂದು ಆದೇಶ ಹೊರಡಿಸಲಾಗಿದ್ದು, ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೂ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ದೃಶ್ಯ, ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕವಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯ ನೇತೃತ್ವ ವಹಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಈ ಮಾಧ್ಯಮಗಳಲ್ಲಿ ನಮ್ಮ ವಿಚಾರ ಮತ್ತು ದೃಷ್ಟಿಕೋನ ಪರಿಣಾಮಕಾರಿಯಾಗಿ ಬಿಂಬಿತವಾಗಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆ ತಮಗಿರುವ ಅನುಭವ, ತಿಳುವಳಿಕೆಗಳೊಂದಿಗೆ ವಿಷಯವನ್ನು ಸಮರ್ಪಕವಾಗಿ ಮಂಡಿಸುವ ಸಾಮರ್ಥ್ಯ ಗಮನಿಸಿ ನಿಮ್ಮನ್ನು ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಲಾಗಿದೆ ಎಂದು ಡಿಕೆಶಿ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಜವಾಬ್ದಾರಿ ತಾವು ವಹಿಸಿಕೊಂಡು ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ಮುಖ್ಯಸ್ಥರು ನೀಡುವ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳ ಮೇಲೆ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆ ನೀಡಿದ್ದಾರೆ.