ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಕೊಂಡಾಡುವ ಮೂಲಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಿನ್ನಮತೀಯರಿಗೆ ತೀಕ್ಷ್ಣವಾದ ಸಂದೇಶ ರವಾನೆ ಮಾಡಿದ್ದಾರೆ.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿಎಸ್ವೈ ನೇತೃತ್ವದ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ ಎಂದರು.
ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ಕೊರೊನಾ ನಡುವೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿದೆ ಎಂದು ಬಿಎಸ್ವೈ ಅವರನ್ನು ಕೊಂಡಾಡಿದರು.
ಬಿಎಸ್ವೈ ಆಡಳಿತ ವೈಖರಿಯನ್ನು ಕೊಂಡಾಡಿದ ಅಮಿತ್ ಶಾ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು, ಸ್ವಪಕ್ಷದವರಿಂದಲೇ ಕೇಳಿ ಬರುತ್ತಿತ್ತು. ಸಂಪುಟ ವಿಸ್ತರಣೆಯ ಬಳಿಕ ಸಿಎಂ ಬಿಎಸ್ವೈ ವಿರುದ್ಧ, ಕೆಲವು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಒಂದು ಕಡೆ ಕೊರೊನಾ ನಡುವೆ ಸರ್ಕಾರ ನಡೆಸುವ ಪರಿಸ್ಥಿತಿ, ಮತ್ತೊಂದೆಡೆ ಬಿಜೆಪಿ ಸೇರ್ಪಡೆಯಾದ ಶಾಸಕರ ಹಿತ ಕಾಯುವ ಒತ್ತಡ ಬಿಎಸ್ವೈ ಮೇಲಿತ್ತು. ಇವೆರಡರ ನಡುವೆ ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗಳಿಂದ ಬಿಎಸ್ವೈ ರೋಸಿ ಹೋಗಿದ್ದರು. ಇದೀಗ ಅಮಿತ್ ಶಾ ಅವರೇ ಸಿಎಂ ಕೆಲಸಕ್ಕೆ ಮೆಚ್ಚುಗೆ ನೀಡುವ ಮೂಲಕ, ಎಲ್ಲವನ್ನೂ ತಣ್ಣಗೆ ಮಾಡಿದ್ದಾರೆ.