ಕರ್ನಾಟಕ

karnataka

ETV Bharat / state

ಬೀದಿ ಪಾಲಾಗಿದ್ದ ಬೆಳಗಾವಿಯ ಈ ಮಕ್ಕಳಿಗೆ ಅಮೆರಿಕ ದಂಪತಿಯ ಬೆಚ್ಚನೆಯ ಅಪ್ಪುಗೆ

ಅದೆಷ್ಟೋ ಮಕ್ಕಳು ಹೆಣ್ಣೆಂಬ ಕಾರಣಕ್ಕೆ ಹುಟ್ಟಿನಿಂದಲೇ ಪೋಷಕರಿಂದ ದೂರಾಗುತ್ತಾರೆ. ಅಂಥ ಮಕ್ಕಳು ಆರೈಕೆ ಕೇಂದ್ರದಲ್ಲಿ ಬೆಳೆಯುತ್ತವೆ. ಇದೀಗ ಅಂಥ ಇಬ್ಬರು ಮಕ್ಕಳನ್ನು ಅಮೆರಿಕ ಮೂಲದ ದಂಪತಿ ದತ್ತು ಪಡೆದಿದ್ದಾರೆ.

ಬೀದಿ ಪಾಲಾಗಿದ್ದ ಮಕ್ಕಳಿಗೆ ಅಮೆರಿಕ ದಂಪತಿಯ ಬೆಚ್ಚನೆಯ ಅಪ್ಪುಗೆ!
ಬೀದಿ ಪಾಲಾಗಿದ್ದ ಮಕ್ಕಳಿಗೆ ಅಮೆರಿಕ ದಂಪತಿಯ ಬೆಚ್ಚನೆಯ ಅಪ್ಪುಗೆ!

By

Published : Jul 31, 2021, 11:57 AM IST

ಬೆಳಗಾವಿ:ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ದಿನವೇ ಹೆತ್ತವರಿಂದ ತಿರಸ್ಕರಿಸಲ್ಪಟ್ಟು, ಬೀದಿ ಪಾಲಾಗಿದ್ದ ಕಂದಮ್ಮಗಳಿಗೆ ಇದೀಗ ಅಮೆರಿಕ ದಂಪತಿಯ ಬೆಚ್ಚನೆಯ ಅಪ್ಪುಗೆ ಸಿಕ್ಕಿದೆ. ವಿಶೇಷ (ಸಣ್ಣಪುಟ್ಟ ಕಾಯಿಲೆ) ಇರುವ ಹೆಣ್ಣು ಮಕ್ಕಳ ದತ್ತು ಕೋರಿ ಅರ್ಜಿ ಸಲ್ಲಿಸಿದ್ದ ಅಮೆರಿಕ ದಂಪತಿ ಮನವಿಗೆ ನವದೆಹಲಿಯಲ್ಲಿರುವ ಮಕ್ಕಳ ಆರೈಕೆ ದತ್ತು ಕೇಂದ್ರ ಸ್ಪಂದಿಸಿದೆ.

ಪೋಷಕರಿಗೆ ಬೇಡವಾಗಿದ್ದ ಇಬ್ಬರು ಮಕ್ಕಳು ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಿದ್ದ ಒಂದು ವರ್ಷದ ಕೀರ್ತಿಯನ್ನು ಅಮೆರಿಕದ ಉದ್ಯಮಿ ದಂಪತಿ ಡ್ಯಾನಿ ಸು ಮುರ್ಡರ್ ಹಾಗೂ ಬ್ರ್ಯಾಡಿ ಜೋ ಮುರ್ಡರ್ ದತ್ತು ಪಡೆದಿದ್ದಾರೆ. ಒಂದು ವರ್ಷದ ದಿಶಾಳನ್ನು ಅಮೆರಿಕದ ಉದ್ಯಮಿ ರಾಬಿನ್ಸನ್-ನಾನಾ ದಂಪತಿ ದತ್ತು ಪಡೆದಿದ್ದಾರೆ.

ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ. ವಿಕ್ರಂ ಆಮಟೆ ಮಕ್ಕಳನ್ನು ಅಮೆರಿಕ ದಂಪತಿಗೆ ಹಸ್ತಾಂತರಿಸಿದರು.

ಮಕ್ಕಳಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಇಬ್ಬರು ಉದ್ಯಮಿ ದಂಪತಿ ಭಾರತದ ಮಕ್ಕಳನ್ನು ದತ್ತು ಪಡೆಯಲು ಮಕ್ಕಳ ಆರೈಕೆ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅಮೆರಿಕದಿಂದ ಬೆಳಗಾವಿಗೆ ಬಂದ ಇಬ್ಬರು ದಂಪತಿ ಮಕ್ಕಳನ್ನು ದತ್ತು ಪಡೆದಿದ್ದಾರೆ. ಇಂದು ಈ ದಂಪತಿ ಜತೆಗೆ ಮಕ್ಕಳು ವಿದೇಶಿ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಗೂ ಮುನ್ನ ಬಂಟ್ವಾಳದಲ್ಲಿ ತಲೆಯೆತ್ತಿತು ರಾಮಮಂದಿರ.. ಹೇಗಿದೆ ನೋಡಿ ಯುವಕನ ಕೈಚಳಕ

ವಿದೇಶಕ್ಕೆ ಹಾರಿದ ಬೆಳಗಾವಿಯ ಐದನೇ ಮಗು!

ಕಳೆದ 10 ವರ್ಷಗಳ ಅವಧಿಯಲ್ಲಿ ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಕೇಂದ್ರದಲ್ಲಿ ಐದು ಮಕ್ಕಳನ್ನು ವಿದೇಶಿಗರು ದತ್ತು ಪಡೆದಿದ್ದಾರೆ. ಮೊದಲ ಮಗು ಇಂಗ್ಲೆಂಡ್, ಎರಡನೇ ಮಗು ಆಸ್ಟ್ರೇಲಿಯಾ, ಉಳಿದ ಮೂರು ಮಕ್ಕಳನ್ನು ಅಮೆರಿಕ ಮೂಲದ ದಂಪತಿ ದತ್ತು ಪಡೆದಿದ್ದಾರೆ.

ABOUT THE AUTHOR

...view details