ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಗಣೇಶೋತ್ಸವ.. ಗಮನ ಸೆಳೆಯುತ್ತಿದೆ ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪ

ಬೆಳಗಾವಿಯಲ್ಲಿ ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪ ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರ
ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರ

By ETV Bharat Karnataka Team

Published : Sep 27, 2023, 4:30 PM IST

Updated : Sep 27, 2023, 8:00 PM IST

ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪ

ಬೆಳಗಾವಿ: ಇಲ್ಲಿಯ ಸೋಮನಾಥ ನಗರದ ಜೈ ಕಿಸಾನ್ ಹೋಲ್​ಸೇಲ್ ಬಾಜಿ ಮಾರ್ಕೆಟ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು 35ನೇ ವರ್ಷದ ಗಣೇಶೋತ್ಸವ ನಿಮಿತ್ತ ಈ ಬಾರಿ ಮಹಾರಾಷ್ಟ್ರದ ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪವನ್ನು ನಿರ್ಮಿಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದೆ.

ಮಂದಿರದ ಒಳಗಡೆ ಸ್ವಾಮಿ ಸಮರ್ಥ‌ ಮಹಾರಾಜರ ಮೂರ್ತಿ ಹಾಗೂ ಅವರ ಜೀವನದ ವಿವಿಧ ಕಾಲಘಟ್ಟದ ಭಾವಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಇನ್ನು ರಾತ್ರಿ ಹೊತ್ತು ಇಡೀ ಮಂದಿರವು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೇ ಅಕ್ಕಲಕೋಟ ಮಂದಿರದಲ್ಲಿ ಇರುವಂತೆ ಇಲ್ಲಿಯೂ ಆಲದ ಮರವೊಂದನ್ನು ಕೃತಕವಾಗಿ ಅಳವಡಿಸಲಾಗಿದ್ದು, ಇದಕ್ಕೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ದಾರವನ್ನು ಮರಕ್ಕೆ ಕಟ್ಟುತ್ತಿದ್ದಾರೆ.

ಮಂಡಳಿಯವರು ಎರಡು ತಿಂಗಳಿನಿಂದ ಅಕ್ಕಲಕೋಟ ಮಾದರಿಯ ಮಂದಿರ ನಿರ್ಮಿಸಲು ಸಿದ್ಧತೆ ಕೈಗೊಂಡಿದ್ದರು. ಬೆಳಗಾವಿಯ ಕಲಾವಿದ ವಸಂತ ಪಾಟೀಲ, ಮಹಾರಾಷ್ಟ್ರದ ಲಲಿತ್ ಚಿಕಿತ್ಸಕರ್ ಹಾಗೂ ಅಲವಿನ್ ಫರ್ನಾಂಡಿಸ್ ಅವರು ಈ ಸುಂದರ ಮಂದಿರ ತಯಾರಿಸಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಮುಸ್ಲಿಂ ಧರ್ಮಿಯರು ಸೇರಿ ಎಲ್ಲರೂ ಕೂಡ ಇದಕ್ಕೆ ಕೈ ಜೋಡಿಸುವ ಮೂಲಕ ಸಾಮರಸ್ಯತೆ ಮೆರೆದಿದ್ದಾರೆ.

ಇನ್ನು‌ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನೂ‌ ಮಾಡುತ್ತಾ ಬಂದಿರುವ ಈ ಮಂಡಳಿಯು, ವಿಕಲಚೇತನರ ಸಂಸ್ಥೆ ಮತ್ತು ಮಹೇಶ್ವರಿ ಅಂಧ ಮಕ್ಕಳ ಶಾಲೆ, ನಂದನ ಮಕ್ಕಳ ಧಾಮಗಳಿಗೆ 12 ತಿಂಗಳೂ ಉಚಿತವಾಗಿ ತರಕಾರಿ‌ ಪೂರೈಸುವ ಕಾಯಕ ಮಾಡುತ್ತಿದೆ. ಅಲ್ಲದೇ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸುವ ಮೂಲಕ‌ ಸಾಮಾಜಿಕ ಕಾಳಜಿ ಮೆರೆಯುತ್ತಿದೆ.

ಮಂಡಳಿ ಮುಖಂಡರಾದ ವಿಶ್ವನಾಥ ಪಾಟೀಲ ಮತ್ತು ಸಚಿನ್ ಜಾಧವ ಈಟಿವಿ ಭಾರತ ಜೊತೆಗೆ ಮಾತನಾಡಿ, ರಾಜ್ಯ ಮತ್ತು ದೇಶದ ವಿವಿಧೆಡೆ ಇರುವ ಪ್ರಸಿದ್ಧ ದೇವಸ್ಥಾನಗಳನ್ನು ಬೆಳಗಾವಿಯಲ್ಲೇ ಸೃಷ್ಟಿಸಿ, ಇಲ್ಲಿನ ಜನರಿಗೆ ಅವುಗಳನ್ನು ಪರಿಚಯಿಸುತ್ತಿದ್ದೇವೆ. ಈವರೆಗೆ 12 ಜ್ಯೋತಿರ್ಲಿಂಗಗಳು, ಸುವರ್ಣ ಮಂದಿರ, ಅಮರನಾಥ ದೇಗುಲ, ಕೂಡಲಸಂಗಮ, ತಿರುಪತಿ ಬಾಲಾಜಿ, ಮಹಾರಾಷ್ಟ್ರ ರಾಜ್ಯದ ಜೆಜುರಿಯ ಖಂಡೋಬಾ, ಪ್ರತಾಪಗಡ, ಪುಣೆಯ ದಗಡುಶೇಟ್, ಸಪ್ತಶಿಂಗಿ, ಪಂಢರಪುರ ವಿಠಲ, ಮಾರಲೇಶ್ವರ, ಅಸ್ಸಾಂ ಸೂರ್ಯಮಂದಿರ, ಶಿರಡಿಯ ಸಾಯಿಬಾಬಾ, ಹಾತಕಣಗಲೆಯ ರಾಮಲಿಂಗ ಮಂದಿರ, ಮಹಾಬಳೇಶ್ವರ ಸೇರಿ ಮತ್ತಿತರ ಐತಿಹಾಸಿಕ ದೇವಸ್ಥಾನಗಳ‌ ಮಾದರಿ ನಿರ್ಮಿಸಿದ್ದೆವು ಎಂದು ತಿಳಿಸಿದರು.

ಗಣೇಶನ ದರ್ಶನಕ್ಕೆ ಆಗಮಿಸಿದ್ದ ಡಾ. ಮಹಾಂತೇಶ ಕಲ್ಮಠ ಮತ್ತು ವಿಜಯಲಕ್ಷ್ಮೀ ದಂಪತಿ ಮಾತನಾಡಿ, ಈ ಮಂಡಳಿಯು ಪ್ರತಿವರ್ಷವೂ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸುತ್ತದೆ. ಬಹಳ ಸುಂದರವಾಗಿ ಈ ವರ್ಷ ಅಕ್ಕಲಕೋಟ ಮಹಾರಾಜರ ಮಂದಿರದ ಪ್ರತಿರೂಪ ನಿರ್ಮಿಸಿದ್ದಾರೆ ಎಂದರು. ಉಡುಪಿ ಮೂಲದ ರಘುರಾಮ ಕೊಠಾರಿ, ಪುಷ್ಪಾ ದಂಪತಿ ಮಾತನಾಡಿ, ಬಾಂಬೆ, ಪುಣೆ ಬಿಟ್ಟರೆ ಬೆಳಗಾವಿಯಲ್ಲೇ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತದೆ. ರಾತ್ರಿ ಇಡೀ ಗಣೇಶನ ಮೂರ್ತಿಗಳನ್ನು ವೀಕ್ಷಿಸಲು ನಾವು ಹೋಗುತ್ತೇವೆ. ಬಾಜಿ ಮಾರ್ಕೆಟ್ ಮಂಡಳಿ ತುಂಬಾ ಸುಂದರವಾಗಿ ಮಂದಿರ ನಿರ್ಮಿಸಿದ್ದು ನೋಡಿ, ಖುಷಿಯಾಯಿತು ಎಂದರು.

ಉತ್ತರಪ್ರದೇಶದ ಕಾಶಿಯಿಂದ ಆಗಮಿಸಿದ್ದ ಜೈ ಹನುಮಾನ್​ ಗ್ರೂಪ್ ಸಂಸ್ಥೆಯ ಗಂಗಾಪ್ರಸಾದ ತಿವಾರಿ ಸ್ವಾಮೀಜಿ ಮಾತನಾಡಿ, ಕಳೆದ 9 ವರ್ಷಗಳಿಂದ ಗಣೇಶೋತ್ಸವ ವೇಳೆ ಇಲ್ಲಿಗೆ ಆಗಮಿಸಿ ನಾನು ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ದೇಶದ ಪ್ರಸಿದ್ಧ ಮಂದಿರಗಳನ್ನು ಈ ಮಂಡಳಿಯವರು ನಿರ್ಮಿಸುತ್ತಿದ್ದಾರೆ. ಹಾಗಾಗಿ, ಪ್ರತಿವರ್ಷವೂ ಇಲ್ಲಿಗೆ ಬರುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಸೂರತ್​ನ ಉದ್ಯಮಿ ಮನೆಯಲ್ಲಿ 600 ಕೋಟಿ ರೂ ಬೆಲೆಯ ವಜ್ರದ ಗಣಪತಿ ಪ್ರತಿಷ್ಠಾಪನೆ!

Last Updated : Sep 27, 2023, 8:00 PM IST

ABOUT THE AUTHOR

...view details