ಬೆಳಗಾವಿ: ನಗರದಲ್ಲಿ ಕಾನೂನು ಸುವ್ಯವಸ್ಥೆ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಸಿ.ಹೆಚ್. ಪ್ರತಾಪ್‍ರೆಡ್ಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಎರಡು ದಿನಗಳ ಕಾಲ ಕುಂದಾನಗರಿ ಪ್ರವಾಸ ಕೈಗೊಂಡಿರುವ ಅವರು, ಇಂದು ಬೆಳಗ್ಗೆ ನಗರದ ಎಸ್‍ಪಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಪೊಲೀಸರು ಅವರಿಗೆ ಗೌರವ ವಂದನೆ ಸಲ್ಲಿಸಿದರು. ಬಳಿಕ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಎಡಿಜಿಪಿ ಸಿ.ಹೆಚ್. ಪ್ರತಾಪ್‍ರೆಡ್ಡಿ ಅವರನ್ನು ಬರಮಾಡಿಕೊಂಡರು.
ಬೆಳಗಾವಿ ಎಸ್ಪಿ ಕಚೇರಿಗೆ ಭೇಟಿ ನೀಡಿದ ಎಡಿಜಿಪಿ ಸಿ.ಹೆಚ್. ಪ್ರತಾಪ್ ರೆಡ್ಡಿ ಬಳಿಕ ಮಾತನಾಡಿದ ಎಡಿಜಿಪಿ ಸಿ.ಹೆಚ್. ಪ್ರತಾಪ್ ರೆಡ್ಡಿ, ಮುಂಬರುವ ದಿನಗಳಲ್ಲಿ ಆಗುವ ಪ್ರತಿಭಟನೆಗಳು, ಕೊರೊನಾ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಯಾರಾದರೂ ಶಾಂತಿ ಕದಡಲು ಪ್ರಯತ್ನಿಸಿದರೆ ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜನ್, ಹೆಚ್ಚುವರಿ ಎಸ್‍ಪಿ ಅಮರನಾಥ್‍ರೆಡ್ಡಿ, ಡಿಸಿಪಿಗಳಾದ ಡಾ. ವಿಕ್ರಮ್ ಆಮ್ಟೆ, ಸಿ.ಆರ್. ನೀಲಗಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.