ಕರ್ನಾಟಕ

karnataka

ETV Bharat / state

ಬೆಳಗಾವಿ ಪಾಲಿಕೆ ಎಲೆಕ್ಷನ್: ಪತ್ನಿ ಜತೆ ಆಗಮಿಸಿ ಮತದಾನ ಮಾಡಿದ ಅಭಯ್ ಪಾಟೀಲ್

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಿರುಸಿನಿಂದು ನಡೆಯುತ್ತಿದ್ದು, ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರೊಂದಿಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.

ಅಭಯ್ ಪಾಟೀಲ್
ಅಭಯ್ ಪಾಟೀಲ್

By

Published : Sep 3, 2021, 9:24 AM IST

ಬೆಳಗಾವಿ:ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ನಗರದ ಹೊಸೂರು ಬಸವಣ್ಣ ಗಲ್ಲಿಯಲ್ಲಿರುವ ಮತಗಟ್ಟೆಯಲ್ಲಿ ಶಾಸಕ ಅಭಯ್ ಪಾಟೀಲ ಮತದಾನ ಮಾಡಿದರು.

ಪತ್ನಿ ಜತೆ ಆಗಮಿಸಿ ಮತದಾನ ಮಾಡಿದ ಅಭಯ್ ಪಾಟೀಲ್

ವಾರ್ಡ್ ನಂಬರ್ 23, ಬೂತ್ ಸಂಖ್ಯೆ 146 ರಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಪತ್ನಿ ಪ್ರೀತಿ ಪಾಟೀಲ್ ಜತೆ ಬಂದು ಮತದಾನ ಮಾಡಿದರು. ಈ ವೇಳೆ, ಶಾಸಕ ಮತದಾನ ಕೇಂದ್ರದಲ್ಲಿ ವಿಕ್ಟರಿ ಸಿಂಬಲ್ ತೋರಿಸಿ ಗೆಲುವಿನ ವಿಶ್ವಾಸ ತೋರಿದರು.

ಬಳಿಕ ಮಾತನಾಡಿದ ಅವರು, ಬಿಜೆಪಿಯ 45+ ಮಿಷನ್ ಕಾರ್ಯರೂಪಕ್ಕೆ ಬರುತ್ತದೆ. ಜನರು ಬಿಜೆಪಿ ಕೈ ಹಿಡಿಯಲಿದ್ದು, ನಮ್ಮವರೇ ಮೇಯರ್​ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಮಹಾನಗರ ಪಾಲಿಕೆಗೆ ಈ ಹಿಂದೆ ಪಕ್ಷದ ಆಧಾರದಲ್ಲಿ ಚುನಾವಣೆ ಆಗುತ್ತಿರರಲಿಲ್ಲ.‌ ಪಕ್ಷೇತರರಾಗಿ ಆಯ್ಕೆಯಾಗಿ ಆಯಾ ರಾಮ್ ಗಯಾ ರಾಮ್ ರೀತಿ ಮಾಡ್ತಿದ್ರು.

ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧಿಸುತ್ತಿರುವುದರಿಂದ ಎಂಇಎಸ್ ಅಷ್ಟೇ ಅಲ್ಲ. ಎಲ್ಲಾ ರಾಜಕೀಯ ಪಕ್ಷಗಳಿಗೆ ನಡುಕ ಶುರುವಾಗಿದೆ. ಬಿಜೆಪಿಗೆ ಬದ್ಧತೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ನಡುಕ ಶುರುವಾಗಿದ್ದು, ಆರನೇ ತಾರೀಖು ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ. ಸುಳ್ಳು ಆಶ್ವಾಸನೆಗಳಿಗೆ ಪೂರ್ಣ ವಿರಾಮ ಕೊಡುವ ಚುನಾವಣೆ ಇದಾಗುತ್ತದೆ ಎಂದರು.

ಸತೀಶ್ ಜಾರಕಿಹೊಳಿಗೆ ತಿರುಗೇಟು

ಬಿಜೆಪಿ ಮಿಷನ್ 45 ಹೇಳಿದ್ದು ಮಿಷನ್ 4 ಸಹ ಆಗಲ್ಲ ಎಂಬ ಸತೀಶ್ ಜಾರಕಿಹೊಳಿ‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಹೇಳಿದಾರಲ್ಲ. ಆರನೇ ತಾರೀಖು ಜನ ಏನು ಉತ್ತರ ಕೊಟ್ಟಿದಾರೆ ಎನ್ನುವುದು ಗೊತ್ತಾಗುತ್ತೆ. ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿದ್ದ ಆಯಾ ರಾಮ್ ಗಯಾ ರಾಮ್‌ ಸಂಸ್ಕೃತಿಗೆ ಈ ಚುನಾವಣೆ ತಿಲಾಂಜಲಿ ಹಾಡಲಿದೆ. ಪಕ್ಷ ಆಧಾರಿತ ಚುನಾವಣೆ ಆರಂಭಿಸಿದ ಹೊಸ ಶಕೆ ಬಿಜೆಪಿಯ ಮಾಡಿದ ಹೆಗ್ಗಳಿಕೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಹೊಸ ದಿಕ್ಕು ನೀಡಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಕ್ಕೆ ಮಹಿಳೆ ಆಕ್ರೋಶ

ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವುದಕ್ಕೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಗರದ ಬಸವಣಗಲ್ಲಿಯಲ್ಲಿರುವ ಮತಗಟ್ಟೆ 146ರಲ್ಲಿ ಮತದಾನಕ್ಕೆ ಕುಟುಂಬ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದಕ್ಕೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹೆಲ್ಪ್‌ಲೈನ್ ನಂಬರ್​ಗೆ ಕರೆ ಮಾಡಿ ನಾವು ಮರಾಠಿ ಅಂತಾ ಹೆಸರು ಬಿಟ್ಟಿದ್ದೀರಿ ಎಂದು ಹೈಡ್ರಾಮಾ ಮಾಡಿದರು. ನನ್ನ ಹಕ್ಕು ಚಲಾಯಿಸಲೇಬೇಕು ಮತದಾನಕ್ಕೆ ವ್ಯವಸ್ಥೆ ಮಾಡಿ ಎಂದು ಪೋನ್​​ನಲ್ಲಿ ಆವಾಜ್ ಹಾಕಿ, ಮತದಾನ ಕೇಂದ್ರ ಒಳಗೆ ಹೋಗಿ ಗಲಾಟೆ ಮಾಡಿದರು‌.

ವೈಭವ ನಗರದಲ್ಲೂ ಇದೇ ಸಮಸ್ಯೆ ಆಗಿದ್ದು, ಮತಗಟ್ಟೆಯಲ್ಲಿರುವ ಚುನಾವಣಾ ಸಿಬ್ಬಂದಿ ಜೊತೆಗೆ ಅಭ್ಯರ್ಥಿಯೊಬ್ಬರು ವಾಗ್ವಾದ ನಡೆಸಿದ್ದಾರೆ. ನಮ್ಮ ಬೆಂಬಲಿಗರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ಅವರನ್ನು ಯಾವುದೇ ಕಾರಣಕ್ಕೂ ವಾಪಸ್ ಕಳಿಸಬೇಡಿ. ಮತದಾನಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

ಮತಗಟ್ಟೆಗೆ ಪೂಜೆ ಬಳಿಕ ವೋಟಿಂಗ್

ಪಕ್ಷೇತರ ಅಭ್ಯರ್ಥಿ ಚನ್ನಬಸಪ್ಪ ಬಾಗೇವಾಡಿ ಮತಗಟ್ಟೆಗೆ ಪೂಜೆ ಸಲ್ಲಿಸಿ, ಬಳಿಕ ಕುಟುಂಬಸ್ಥರೊಂದಿಗೆ ಬಂದು ಮತದಾನ ಮಾಡಿದರು.

385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 58 ವಾರ್ಡ್​​ಗಳಿಗೆ ಮತದಾನ ನಡೆಯಲಿದ್ದು, 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆ ಪೈಕಿ ಬಿಜೆಪಿ 55, ಕಾಂಗ್ರೆಸ್ 45, ಎಂಇಎಸ್- 21, ಜೆಡಿಎಸ್-11, ಆಮ್ ಆದ್ಮಿ 27, MIM- 7, ಪ್ರಜಾಕೀಯ -1, SDPI -1 ಪಕ್ಷೇತರರು- 217 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 4,28,364 ಮತದಾರರಿದ್ದಾರೆ. ಪುರುಷ ಮತದಾರರು 2,13,526, ಮಹಿಳಾ ಮತದಾರರು 2,14,834 ಮಂದಿಯಿದ್ದಾರೆ. ಒಟ್ಟು 415 ಮತಗಟ್ಟೆಗಳನ್ನು ತೆರೆಯಲಾಗಿದೆ. 415 ಮತಗಟ್ಟೆಗಳಿಗೆ 457 ತಂಡ ರಚನೆ ಮಾಡಲಾಗಿದೆ. ಚುನಾವಣೆಗಾಗಿ 1,828 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ABOUT THE AUTHOR

...view details